ಚಾಮರಾಜನಗರ: ಈ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದೆ. 32 ಮಕ್ಕಳು ಇದ್ದಾರೆ. ಆದರೆ, ಆಗಸ್ಟ್ ಎರಡನೇ ವಾರದಿಂದ ಶಾಲೆಗೆ ಶಿಕ್ಷಕರೇ ಇಲ್ಲ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಕನಿಷ್ಠ ತಾತ್ಕಾಲಿಕವಾಗಿ ಶಿಕ್ಷಕರನ್ನು ನೇಮಿಸುವ ಪ್ರಯತ್ನವೇ ನಡೆದಿಲ್ಲ!
-ಇದು ಕೊಳ್ಳೇಗಾಲ ತಾಲ್ಲೂಕಿನ ಕಾಡಂಚಿನಲ್ಲಿರುವ ಮೀಣ್ಯಂ ಸಮೀಪದ ಕೆಂಪಸಿದ್ದೇಗೌಡನದೊಡ್ಡಿ(ಕೆ.ಎಸ್. ದೊಡ್ಡಿ) ಶಾಲೆಯ ಕಥೆ-ವ್ಯಥೆ. ಆಗಸ್ಟ್ ತಿಂಗಳಿನಲ್ಲಿ ಕೆಲವು ದಿನದವರೆಗೆ ಮಕ್ಕಳು ಶಾಲೆಗೆ ಹೋಗುತ್ತಿದ್ದರು.
ಆಗ ಬಿಸಿಯೂಟ ಕೂಡ ನೀಡಲಾಗುತ್ತಿತ್ತು. ಶಿಕ್ಷಕರು ಇಲ್ಲದೆ ಶಾಲೆಯೂ ನಡೆಯುತ್ತಿತ್ತು. ಆ ನಂತರ ಶಿಕ್ಷಕರೇ ಇಲ್ಲದಿರುವ ಪರಿಣಾಮ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ.
ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ಈ ಕುರಿತು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದಸರಾ ರಜೆ ಮುಗಿದ ನಂತರ ಜಿಲ್ಲೆಯಲ್ಲಿ ಶಾಲೆಗಳು ಆರಂಭವಾಗಿದ್ದರೂ, ಕೆ.ಎಸ್. ದೊಡ್ಡಿ ಶಾಲೆಯ ಬೀಗವನ್ನು ಇಂದಿಗೂ ತೆಗೆದಿಲ್ಲ.
ಕಳೆದ ಒಂದು ವರ್ಷದ ಹಿಂದೆ ಈ ಶಾಲೆಗೆ ಕಾಯಂ ಶಿಕ್ಷಕರೊಬ್ಬರು ಇದ್ದರು. ಅವರು ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮದರ್ಜೆ ಸಹಾಯಕ ಹುದ್ದೆ ಸಿಕ್ಕಿದ ಹಿನ್ನೆಲೆಯಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದ್ದರು. ನಂತರ, ತೆರವಾದ ಹುದ್ದೆಗೆ ಸೂಳೆಕೊಬೆ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಶಿಕ್ಷಕರಲ್ಲಿ ಒಬ್ಬರನ್ನು ಕೆ.ಎಸ್. ದೊಡ್ಡಿಗೆ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗಿತ್ತು.
ಈ ನಡುವೆ ಸೂಳೆಕೊಬೆ ಶಾಲೆಯಲ್ಲಿದ್ದ ಇನ್ನೊಬ್ಬ ಶಿಕ್ಷಕ ಪ್ರೌಢಶಾಲೆಗೆ ಬಡ್ತಿ ಹೊಂದಿ ವರ್ಗಾವಣೆಗೊಂಡರು. ಅನಿವಾರ್ಯವಾಗಿ ಕೆ.ಎಸ್. ದೊಡ್ಡಿಯಲ್ಲಿದ್ದ ಶಿಕ್ಷಕ ಮೂಲ ಶಾಲೆಗೆ ಹಿಂತಿರುಗಿದರು. ಹೀಗಾಗಿ, ಆಗಸ್ಟ್ 2ನೇ ವಾರದಿಂದಲೂ ಈ ಶಾಲೆಗೆ ಶಿಕ್ಷಕರನ್ನು ನಿಯೋಜನೆ ಮಾಡಿಲ್ಲ. ಇದರಿಂದ ಕಲಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಕೂಡಲೇ ನಮ್ಮೂರ ಶಾಲೆಗೆ ಒಬ್ಬ ಶಿಕ್ಷಕರನ್ನು ಕಳುಹಿಸಿಕೊಡಿ ಎಂದು ಮಕ್ಕಳು ಕಣ್ಣೀರಿಡುವಂತಾಗಿದೆ.
ಮಕ್ಕಳು ಶಿಕ್ಷಕರಿಲ್ಲದೆ ತೊಂದರೆ ಅನುಭವಿಸುತ್ತಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತಾಗಿ ಶಿಕ್ಷಕರನ್ನು ನೇಮಿಸಲು ಶಾಸಕರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ನಿರ್ಲಕ್ಷ್ಯವಹಿಸಿದ್ದಾರೆ. ಕಾಡಂಚಿನ ಗ್ರಾಮಗಳ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆಯೂ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎನ್ನುವುದು ಗ್ರಾಮಸ್ಥರ ದೂರು.
`ನಾನು ಎರಡು ಬಾರಿ ಹನೂರು ಬಿಇಒ ಕಚೇರಿಗೆ ಭೇಟಿ ನೀಡಿ ನಮ್ಮೂರ ಶಾಲೆಗೆ ಶಿಕ್ಷಕರನ್ನು ನೇಮಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಆದರೆ, ನನ್ನ ಮನವಿಗೆ ಇಂದಿಗೂ ಸ್ಪಂದಿಸಿಲ್ಲ. ಇದರ ಪರಿಣಾಮ ಮಕ್ಕಳ ಕಲಿಕೆಗೆ ತೊಡಕಾಗಿದೆ.
ದಸರಾ ರಜೆ ಪೂರ್ಣಗೊಂಡ ನಂತರ ಶಿಕ್ಷಕರನ್ನು ನೇಮಿಸುವುದಾಗಿ ಬಿಇಒ ಕಚೇರಿಯ ಅಧಿಕಾರಿಗಳು ತಿಳಿಸಿದ್ದರು. ಶಾಲೆ ಆರಂಭವಾಗಿ ವಾರ ಉರುಳಿದರೂ ಸ್ಕೂಲ್ ಬೀಗ ತೆಗೆದಿಲ್ಲ. ಸದ್ಯಕ್ಕೆ ಬಿಸಿಯೂಟವನ್ನು ಸ್ಥಗಿತಗೊಳಿಸಲಾಗಿದೆ~ ಎಂದು ಕೆ.ಎಸ್. ದೊಡ್ಡಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬೇರೆಗೌಡ ಅಳಲು ತೋಡಿಕೊಂಡರು.
`ಕೂಡಲೇ, ಕಾಯಂ ಶಿಕ್ಷಕರನ್ನು ನೇಮಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕ್ರಮಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.
ಕ್ರಮದ ಭರವಸೆ: `ಕೆ.ಎಸ್. ದೊಡ್ಡಿ ಶಾಲೆಯಲ್ಲಿ ಶಿಕ್ಷಕರಿಲ್ಲದಿರುವ ವಿಷಯ ಗಮನಕ್ಕೆ ಬಂದಿದೆ. ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಜತೆಗೆ ಚರ್ಚಿಸಿದ್ದೇನೆ. ಕೂಡಲೇ, ಶಿಕ್ಷಕರ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು.
ಜತೆಗೆ, ಶಾಲೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ~ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೆಳ್ಳಶೆಟ್ಟಿ `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.