ADVERTISEMENT

ನೀರಾ ನೀತಿ ಜಾರಿಗೆ ಹೋರಾಟ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:05 IST
Last Updated 8 ಅಕ್ಟೋಬರ್ 2011, 10:05 IST

ಚಾಮರಾಜನಗರ: `ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರವೇ ನೀರಾ ನೀತಿ ಜಾರಿಯಾಗುತ್ತದೆ~ ಎಂದು ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ಎಂ. ಮಹೇಶ್‌ಪ್ರಭು ಹೇಳಿದರು.

ನಗರದ ಎಪಿಎಂಸಿ ಪ್ರಾಂಗಣದಲ್ಲಿ ಈಚೆಗೆ ನಡೆದ ಚಾಮರಾಜನಗರ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನುಸಿಪೀಡೆ ರೋಗದಿಂದ ತೆಂಗಿನ ಫಸಲು ಹಾಳಾಗಿದೆ. ನೀರಾ ಕಟ್ಟಿ ನುಸಿಪೀಡೆ ಕಡಿಮೆಗೊಳಿಸಲು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಕಾಲದಲ್ಲಿ ನೀರಾ ಚಳವಳಿ ಪ್ರಾರಂಭಿಸಲಾಯಿತು. ಆದರೆ, ನೀರಾ ನೀತಿ ಜಾರಿಗೊಳಿಸಿದರೆ ಅಬಕಾರಿ ಶುಲ್ಕ ಕಡಿಮೆಯಾಗುತ್ತದೆಂದು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ಮಂಗಳೂರಿನ ತುಂಬೆ ಎಂಬಲ್ಲಿ ನೀರಾ ಮಾದರಿ ಘಟಕ ಸ್ಥಾಪಿಸಿ ಅದರ ಫಲಿತಾಂಶದ ಮೇಲೆ ರಾಜ್ಯ ವ್ಯಾಪ್ತಿ ನೀರಾ ಘಟಕ ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ, ಇಂದಿಗೂ ಯಾವುದೇ ಕ್ರಮಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಂಘಟನಾತ್ಮವಾದ ಹೋರಾಟ ಮಾಡಬೇಕಿದೆ ಎಂದರು.

ಸಂಘದ ಒತ್ತಾಯದ ಮೇರೆಗೆ ಸಮಗ್ರ ತೆಂಗು ಸಂಸ್ಕರಣಾ ಘಟಕ ಸ್ಥಾಪಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದೆ. ಪ್ರಸ್ತುತ ತೆಂಗಿನ ಪುಡಿ, ತೆಂಗಿನ ಎಣ್ಣೆ, ಇದ್ದಿಲು ಘಟಕಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ಸಂಸ್ಕರಣ ಘಟಕ ಸ್ಥಾಪಿಸುವುದರಿಂದ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಉದ್ದೇಶಿತ ಸಮಗ್ರ ತೆಂಗು ಸಂಸ್ಕರಣಾ ಘಟಕದಲ್ಲಿ ಪ್ರತಿದಿನಕ್ಕೆ  1 ಲಕ್ಷ ತೆಂಗಿನಕಾಯಿ ಅರೆಯಲು ನಿರ್ಧರಿಸಲಾಗಿದೆ. ಸದಸ್ಯರ ತೆಂಗು ಉತ್ಪಾದನೆಗೆ ಪ್ರಥಮ ಆದ್ಯತೆ ನೀಡಲಾಗುವುದು. ತೆಂಗು ಅಭಿವೃದ್ಧಿ ಮಂಡಳಿಯಿಂದ ತೆಂಗು ಪ್ರಾತ್ಯಕ್ಷಿಕೆ ತಾಕು ಯೋಜನೆಯಡಿ ರೈತರಿಗೆ ಉತ್ಪಾದಕತೆ ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಶಾಂತಮಲ್ಲಪ್ಪ 2010-11ನೇ ಸಾಲಿನ ಸಂಘದ ಆಯ-ವ್ಯಯ ಮಂಡಿಸಿದರು. ಸಂಘದ ನಿರ್ದೇಶಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.