ADVERTISEMENT

ನೀರಿನ ಸಮಸ್ಯೆ ನಿವಾರಣೆಗೆ ಮುಂಜಾಗ್ರತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2011, 7:15 IST
Last Updated 9 ಏಪ್ರಿಲ್ 2011, 7:15 IST
ನೀರಿನ ಸಮಸ್ಯೆ ನಿವಾರಣೆಗೆ ಮುಂಜಾಗ್ರತೆ ಅಗತ್ಯ
ನೀರಿನ ಸಮಸ್ಯೆ ನಿವಾರಣೆಗೆ ಮುಂಜಾಗ್ರತೆ ಅಗತ್ಯ   

ಚಾಮರಾಜನಗರ: ‘ಬೇಸಿಗೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರದಂತೆ ಅಧಿಕಾರಿಗಳು ಮುಂಜಾಗ್ರತೆವಹಿಸಬೇಕು’ ಎಂದು ಶಾಸಕ ಎಚ್.ಎಸ್. ಮಹದೇವಪ್ರಸಾದ್ ಸೂಚಿಸಿದರು. ತಾಲ್ಲೂಕಿನಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಶುಕ್ರವಾರ ಒಟ್ಟು 2.87 ಕೋಟಿ ರೂ ಅಂದಾಜುವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಲೆಯೂರು-ಹಿರಿಬೇಗೂರು ರಸ್ತೆ, ಮಲೆಯೂರು ಸಂಪರ್ಕ ರಸ್ತೆಯಿಂದ ಕನಕಗಿರಿವರೆಗಿನ ರಸ್ತೆ, ನಿಟ್ರೆಯಿಂದ ಹಿರಿಬೇಗೂರು ಮಾರ್ಗವಾಗಿ ಅರಳಿಕಟ್ಟೆ ರಸ್ತೆ ಕಾಮಗಾರಿಗೆ ಹಣ ಮಂಜೂರಾಗಿದೆ. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದರು. ಈ ಭಾಗದ ರಸ್ತೆಗಳು ತೀವ್ರ ಹದಗೆಟ್ಟಿದ್ದವು. ದುರಸ್ತಿಗೆ ಗ್ರಾಮಸ್ಥರು ಹಲವು ದಿನದಿಂದ ಬೇಡಿಕೆ ಸಲ್ಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಅರಳಿಕಟ್ಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ವೈದ್ಯರಿಗೆ ವಸತಿಗೃಹ ಕಲ್ಪಿಸಬೇಕು. ಶಾಲಾ ಪರಿಸರವನ್ನು ಉತ್ತಮಪಡಿಸಬೇಕು. ಅರಳಿಕಟ್ಟೆಯಲ್ಲಿಯೇ ಪಡಿತರ ಪದಾರ್ಥ ಸಿಗುವ ವ್ಯವಸ್ಥೆ ಮಾಡಬೇಕು. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವ ಭವನ ನಿರ್ಮಿಸಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.

ಸಮಾರಂಭದಲ್ಲಿ ಜಿ.ಪಂ. ಸದಸ್ಯೆ ಸರಸಮ್ಮ ಸುಬ್ಬನಾಯಕ, ತಾ.ಪಂ. ಸದಸ್ಯೆ ರಾಣಿ, ಗ್ರಾ.ಪಂ. ಅಧ್ಯಕ್ಷ ಗುರುಸ್ವಾಮಿ, ರಾಜ್‌ಕುಮಾರ್, ಮಂಗಳಮ್ಮ, ಚಿಕ್ಕಕೂಸಪ್ಪ, ಕೆರೆಹಳ್ಳಿ ನವೀನ್, ತಾ.ಪಂ. ಮಾಜಿ ಸದಸ್ಯ ರವಿಕುಮಾರ್, ಹರವೆ ಆನಂದ್, ಪ್ರಕಾಶ್, ಶಾಂತಮಲ್ಲಪ್ಪ, ಎಂ. ಪುಟ್ಟಣ್ಣ, ಬಸವಣ್ಣ, ಮಹದೇವು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.