ADVERTISEMENT

ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧ

ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 6:09 IST
Last Updated 27 ಮಾರ್ಚ್ 2018, 6:09 IST
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬಾರದು ಎಂದು ಒತ್ತಾಯಿಸಿ ಚಾಮರಾಜನಗರದಲ್ಲಿ ಸೋಮವಾರ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬಾರದು ಎಂದು ಒತ್ತಾಯಿಸಿ ಚಾಮರಾಜನಗರದಲ್ಲಿ ಸೋಮವಾರ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬಾರದು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಭುವನೇಶ್ವರಿ ವೃತ್ತದಲ್ಲಿ ಸಮಾವೇಶಗೊಂಡ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಿರ್ವಹಣಾ ಮಂಡಳಿ ರಚನೆ ಬೇಡ ಎಂದು ಘೋಷಣೆ ಕೂಗಿದರು.

ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಕೆಆರ್‌ಎಸ್, ಹಾರಂಗಿ , ಹೇಮಾವತಿ, ಕಬಿನಿ, ಕಾವೇರಿ ನದಿಗಳು ರಾಜ್ಯದ ಅವಿಭಾಜ್ಯ ಅಂಗ. ಈ ನದಿಗಳನ್ನು ತಮಿಳುನಾಡಿನವರು ತಮ್ಮ ಸ್ವಾಧೀನಕ್ಕೆ ಪಡೆಯಲು ಹೋರಾಟ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಹಣ ಮಂಡಳಿ ರಚನೆ ಮಾಡಬಾರದು. ಮಾಡಿದ್ದೆ ಆದರೆ, ರಾಜ್ಯದಲ್ಲಿ ತೀವ್ರ ಚಳುವಳಿ ಆರಂಭಿಸಿ ಸಾವಿರಾರು ಮಂದಿ ಜೈಲ್‍ಬರೋ ಚಳುವಳಿ ಮಾಡುತ್ತೇವೆ. ಜತೆಗೆ, ರಾಜ್ಯ ಬಂದ್‍ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಜಿಲ್ಲೆಯ ಸಮೀಪವಿರುವ ಬದನಗುಪ್ಪೆ ಹಾಗೂ ಚಂದಕವಾಡಿ ಗ್ರಾಮಗಳನ್ನು ಉಪನಗರ ಮಾಡಬೇಕು. ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಕಡುಬಡವರಿಗೆ 5 ಸಾವಿರ ನೀವೇಶನ ನೀಡಬೇಕು. ಚಾಮರಾಜನಗರಕ್ಕೆ ಕಾವೇರಿ ಕುಡಿಯುವ ನೀರಿನ 2ನೇ ಹಂತವಾಗಬೇಕು. ಸಮಗ್ರ ಅಭಿವೃದ್ದಿಗೆ ಸರ್ಕಾರ ₹ 5 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ಮತದಾರರಿಗೆ ಕೆಲವು ಅಭ್ಯರ್ಥಿಗಳು ಹಣ, ಹೆಂಡ, ಇತ್ಯಾದಿಗಳನ್ನು ಹಂಚುವ ಸಾಧ್ಯತೆಯಿದೆ. ಈ ರೀತಿ ಮಾಡುವವರಿಗೆ 6 ವರ್ಷಗಳ ಕಾಲ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದ ಹಾಗೆ ಶಿಕ್ಷೆ ನೀಡಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ದಳಪತಿ ವೀರತಪ್ಪ, ಕಾರ್‌ನಾಗೇಶ್, ಸುರೇಶ್‍ನಾಗ್, ನಾಗರಾಜ್ ಮೂರ್ತಿ, ಡೈರಿ ಮಹದೇವಪ್ಪ, ಕುಮಾರ್, ಚನ್ನಮಲ್ಲಪ್ಪ, ಶಿವಕುಮಾರ್, ಬಸಣ್ಣ, ನಾಗರಾಜ್, ನಾಯಕ್, ಶಿವಲಿಂಗಮೂರ್ತಿ, ವರದರಾಜು, ಮಹೇಶ್, ಲೋಕೇಶ್, ಸೋಮಣ್ಣ, ಮಲ್ಲಿಕಾರ್ಜುನ, ರಮೇಶ್, ಲಿಂಗನಾಯಕ್, ನಂಜುಂಡಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.