ADVERTISEMENT

ನೀಲಗಿರಿ ಮರಗಳ ನಿಟ್ಟುಸಿರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 9:50 IST
Last Updated 6 ಫೆಬ್ರುವರಿ 2011, 9:50 IST

ಯಳಂದೂರು: ಸುಮಾರು 50 ವರ್ಷಗಳಿಂದ ರಸ್ತೆಯ ಇಕ್ಕೆಲಗಳಲ್ಲಿ ನಾವು ಬೆಳೆದಿದ್ದೇವೆ. ಈಗ ರಾಷ್ಟ್ರೀಯ ಹೆದ್ದಾರಿ 209ರಲ್ಲಿದ್ದೇವೆ ಎಂಬುದು ನಮಗೂ ಹೆಮ್ಮೆ. ಆದರೆ ರಾತ್ರೋರಾತ್ರಿ ನಮ್ಮ ಬುಡಕ್ಕೆ ಕೊಡಲಿ ಹಾಕುವ ಕಳ್ಳರ ಸಂಖ್ಯೆ ಹೆಚ್ಚಿದೆ. ಯಾರ ಬಲಿ ಯಾವಾಗಲೋ? ಎಂಬ ಭಯದಲ್ಲೇ ನಾವು ಬುದುಕುತ್ತಿದ್ದೇವೆ. ಹೌದು, ನಾವು ಯಳಂದೂರು ಪಟ್ಟಣದಿಂದ ಹಾದು ಹೋಗುವ ಹೆದ್ದಾರಿ ಪಕ್ಕ ಸಮೃದ್ಧವಾಗಿ ಬೆಳೆದಿರುವ ನೀಲಗಿರಿ ಮರಗಳು!

ಅರಣ್ಯ ಇಲಾಖೆ ಕಚೇರಿ ನಮ್ಮ ಪಕ್ಕದಲ್ಲೇ ಇದೆ. ಆದರೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಅವರು ರಕ್ಷಣೆಗೆ ಅವರು ಬರುತ್ತಿಲ್ಲ. ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರದ ಸ್ವತ್ತಾದ ನಮಗೆ ರಕ್ಷಣೆ ಸಿಗುತ್ತಿಲ್ಲ. ಹಂತಕರು ಕತ್ತಲಾದ ಮೇಲೆ ಬಂದು ನಮ್ಮ ಮೇಲೆರಗುತ್ತಾರೆ. ಮೊದಲು ಹರಿತವಾದ ಅಸ್ತ್ರದಿಂದ ಗಾಯ ಮಾಡುತ್ತಾರೆ. ಆಗ ಕಣ್ಣುಗಳಲ್ಲಿ ಕಣ್ಣೀರ ಧಾರೆ ಜಿನುಗುತ್ತದೆ. ಆ ನೋವಿನಲ್ಲೇ ಸೊರಗುವ ನಾವು ಒಣಗಿ ಧರೆಗೆ ಉರುಳುತ್ತೇವೆ. ಆಗ ಮರಗಳ್ಳರಿಗೆ ಸುಲಭದ ತುತ್ತಾಗುತ್ತೇವೆ.

ರಸ್ತೆಯ ಇಕ್ಕೆಲಗಳಲ್ಲಿ ಹಸಿರಾಗಿ ಬೆಳೆದಿರುವ ನಮ್ಮನ್ನು ಸಾವಿರಾರು ಕ್ಯಾಮೆರಾಗಳು ಕ್ಲಿಕ್ಕಿಸಿವೆ. ಹಲವು ಪರಿಸರ ಪ್ರೇಮಿಗಳು ಹೊಗಳುತ್ತಾರೆ. ನಮಗೆ ನೆರಳು, ಮನಸ್ಸಿಗೆ ಆಹ್ಲಾದ ನೀಡುವ ನೀವು ಸುಖವಾಗಿ, ಬಾಳಿರಿ ಎಂದು ಅರಸುತ್ತಾರೆ. ಆದರೆ ನಮ್ಮ ಬಂಧುಗಳ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿರುವುದು ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಹಲವು ಬಾರಿ ಮಾಧ್ಯಮಗಳು ವರದಿ ಮಾಡಿವೆ. ಯಾರೂ ಕೂಡ ನಮ್ಮ ಬಗ್ಗೆ ಎಚ್ಚೆತ್ತುಕೊಂಡಿಲ್ಲ ಎಂಬ ಕೊರಗು ನಮ್ಮದು.

‘ಮಿರ್ಟೆಸೀ’(ಯೂಕಲಿಪ್ಟಸ್) ಕುಟುಂಬಕ್ಕೆ ಸೇರಿದ ನಮ್ಮ ಮೂಲ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್. ಪ್ರಪಂಚದೆಲ್ಲೆಡೆ 700ಕ್ಕೂ ಹೆಚ್ಚು ಪ್ರಭೇದಗಳಲ್ಲಿ ನಾವಿದ್ದೇವೆ. ಎಲ್ಲ ಕಡೆ ಅಂಟು ಇಲ್ಲವೆ ಗೊಂದು ಮರಗಳೆಂದು ನಮ್ಮ ಹೆಸರಿದೆ. ಭಾರತದಲ್ಲಿ ಪ್ರಥಮ ಬಾರಿಗೆ ನೀಲಿಗಿರಿ ಪರ್ವತ ಸಾಲಿನಲ್ಲಿ ನಮ್ಮನ್ನು ಬೆಳಿಸಿದ್ದರಿಂದ ನಮಗೆ ಈ ಹೆಸರೇ ಉಳಿಯಿತು. ನಮ್ಮ ಎತ್ತರ ಸುಮಾರು 30-100 ಮೀಟರ್.

ನಾವು ಹಿಮಭರಿತ, ಅತಿಉಷ್ಣ, ಜೌಗು, ಸುಣ್ಣಮಿಶ್ರಿತ ಮರಳಿನಲ್ಲಿ ಬೆಳೆಯುವ ನಿತ್ಯಹರಿದ್ವರ್ಣ ವೃಕ್ಷಗಳು. ಹೂ ಟೊಪ್ಪಿಗೆ ಆಕಾರದಲ್ಲಿದೆ. ಬೀಜ ಅತಿ ಸಣ್ಣ. ಸಸಿಮಡಿ, ನಾಟಿ ಮಾಡಿದರೂ ಚಿಗುರುತ್ತೇವೆ. ಮೆಲನೋಫ್ಲೋಯ, ಯೂ ಮೈಕ್ರೋತಿಕ್ ವಿಧಗಳು ಮೈದಾನದಲ್ಲೂ ಸಮೃದವಾಗಿ ಬೆಳೆಯುತ್ತೇವೆ.ಆದರೆ, ಒಂದು ವಿಷಯ ತಿಳಿದುಕೊಳ್ಳಿ. ಆಯುರ್ವೇದ ಪದ್ಧತಿಯಲ್ಲಿ ನಮಗೂ ಮಹ ತ್ವದ ಸ್ಥಾನವಿದೆ. ವೃಕ್ಷ. ಎಲೆ ಹಾಗೂ ಎಳೆಯ ಕಾಂಡದಲ್ಲಿ ತೈಲಗ್ರಂಥಿ ಒಸರುತ್ತವೆ. ಸುಗಂದ ದ್ರವ್ಯ, ಔಷಧ, ಮಕರಂದ, ಫ್ಲೈವುಡ್, ಬಣ್ಣ, ರೇಯಾನ್, ಚರ್ಮ ಹದ ಮಾಡಲು, ಮದ್ಯಸಾರ, ಕಾಗದ ತಯಾರಿಕೆಗೆ ನಮ್ಮ ಕೊಡುಗೆ ಅನನ್ಯ. ಸಸ್ಯ ರಸ, ಜೌಗು ನೆಲ ಒಣಗಿಸಲು, ಮಲೇರಿಯಾ ತಡೆಗಟ್ಟಲೂ ಬಳಸಲಾಗುತ್ತದೆ.

ಪರಿಸರದ ಭಾಗವಾದ ನಮ್ಮ ಸಂತಾನಕ್ಕೆ ಈಗ ಉಳಿಗಾಲವಿಲ್ಲ, ಹಸಿರು ಹತ್ಯೆಯಿಂದ ಕಳಚಿಕೊಳ್ಳುವ ನಮ್ಮ ಕೊಂಡಿಗಳು, ತಾಯಿಯನ್ನು ಕಳೆದುಕೊಂಡ ಮಕ್ಕಳಂತಾಗಿದೆ. ರಸ್ತೆಗೆ ನೆರಳಾಗಿ, ಮನುಕುಲಕ್ಕೆ ಪ್ರಾಣವಾಯು ನೀಡುವ ನಮ್ಮ  ವೇದನೆ ನಮಗೇ ಗೊತ್ತು. ಪರಿಸರ ದಿನ, ವೃಕ್ಷಾರೋಪಣ ಕಾರ್ಯಗಳಲ್ಲಿ ನಮ್ಮ ಒಳಿತಿನ ಬಗ್ಗೆ ಭಾಷಣ ಮಾಡುವವರು ಈಗ ನಮ್ಮ ಸ್ಥಿತಿ ನೋಡಿ ’ಅಪ್ಪಿಕೊ’ ಚಳವಳಿ ಮಾಡಬೇಕಿದೆ.ಇಷ್ಟೆಲ್ಲ ಇದ್ದರೂ ನಮಗೆ ರಕ್ಷಣೆ ನೀಡಿ. ಇನ್ನೂ ಹಲವು ವರ್ಷ ನಾವು ನಿಮ್ಮ ಕಣ್ಣಿಗೆ ತಂಪು ಮನಸ್ಸಿಗೆ ಮುದ ನೀಡುವಲ್ಲಿ ಸಹಕರಿಸಿ... ನಮ್ಮನ್ನು ರಕ್ಷಿಸಿ ಪ್ಲೀಸ್...ಇಂತಿ ನೊಂದ ‘ನೀಲಗಿರಿ ಮರಗಳು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.