
ಗುಂಡ್ಲುಪೇಟೆ: ರಥ ನಿರ್ಮಿಸುವುದು ಹಾಗೂ ಅಲಂಕಾರ ಮಾಡುವುದು ಪುರುಷರು. ಆದರೆ ರಥವನ್ನು ಎಳೆಯುವುದು ಮಾತ್ರ ಮಹಿಳೆಯರು.
ಇದು ತಾಲ್ಲೂಕಿನ ರಾಘವಾಪುರ ಗ್ರಾಮದ ಪಟ್ಟಲದಮ್ಮನ ರಥೋತ್ಸವದ ವಿಶೇಷ.
ಶನಿವಾರ ರಾತ್ರಿಯೇ ಪಟ್ಟಲದಮ್ಮನ ರಥವನ್ನು ಸಿಂಗರಿಸಿ ಗ್ರಾಮದ ದೇವಸ್ಥಾನದ ಬಳಿ ರಥವನ್ನು ಪುರುಷರು ನಿಲ್ಲಿಸುತ್ತಾರೆ.
ಆದರೆ ಈ ರಥವನ್ನು ಮಹಿಳೆಯರು ಎಳೆಯುವುದು ಪದ್ಧತಿಯಾಗಿದೆ. ರಾಘವಾಪುರ ಗ್ರಾಮದಲ್ಲಿ ಪಟ್ಟಲದಮ್ಮನ ರಥೋತ್ಸವವು ಪ್ರತಿ ವರ್ಷ ನಡೆಯುತ್ತದೆ. ಈ ರಥೋತ್ಸವಕ್ಕೆ ತಾಲ್ಲೂಕು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸುವ ಭಕ್ತರು ದೇವಿಯ ದರ್ಶನ ಮಾಡುತ್ತಾರೆ.
ನೂತನ ವಧು-ವರರು ರಥಕ್ಕೆ ಹಣ್ಣು ಜವನ ಎಸೆಯುವುದು ವಾಡಿಕೆಯಾಗಿದೆ. ಈ ರಥೋತ್ಸವಕ್ಕೆ ಗ್ರಾಮದವರು ತಮ್ಮ ನೆಂಟರನ್ನು ಆಹ್ವಾನಿಸಿ ಅತಿಥಿ ಸತ್ಕಾರ ಮಾಡುತ್ತಾರೆ.
ಭಾನುವಾರ ಜರುಗಿದ ಈ ರಥೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.