ADVERTISEMENT

ಪರಿಸರ ಸೂಕ್ಷ್ಮ ವಲಯಕ್ಕೆ ತಾ.ಪಂ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 9:55 IST
Last Updated 18 ಜನವರಿ 2012, 9:55 IST

ಚಾಮರಾಜನಗರ: ತಾಲ್ಲೂಕಿನ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿ ಪರಿಸರ ಸೂಕ್ಷ್ಮ ವಲಯದ ಘೋಷಣೆಗೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬಾರದೆಂದು ಒತ್ತಾಯಿಸಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ನಿರ್ಣಯ ಅಂಗೀಕರಿಸಿದೆ.

ನಗರದ ತಾ.ಪಂ. ಸಭಾಂಗಣದಲ್ಲಿ ಮಂಗಳ ವಾರ ನಡೆದ ಸಭೆಯಲ್ಲಿ ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿ ಸೂಕ್ಷ್ಮ ವಲಯದ ಘೋಷಣೆಗೆ ಸದಸ್ಯರಿಂದ ವಿರೋಧ             ವ್ಯಕ್ತವಾಯಿತು. ಇದರಿಂದ ರೈತರಿಗೆ ಅನನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಘೋಷಣೆಗೆ ಕ್ರಮಕೈಗೊಳ್ಳುವ ಮೊದಲು ಪರಾಮರ್ಶೆ ನಡೆಸಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿತು.

ಸದಸ್ಯ ಆರ್. ಮಹದೇವ್ ಮಾತನಾಡಿ, `ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯ 10 ಕಿ.ಮೀ. ಪ್ರದೇಶ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡಲಿದೆ. ಇದರಿಂದ ರೈತರು ವಾಣಿಜ್ಯ ಬೆಳೆ ಬೆಳೆಯಲು ತೊಂದರೆಯಾಗಲಿದೆ. ಜತೆಗೆ, ಕಾಡಂಚಿನ ಜನರು ಹೆಚ್ಚು ತೊಂದರೆ ಅನುಭವಿಸಲಿದ್ದಾರೆ. ಅರಣ್ಯದಲ್ಲಿ ಗಿರಿಜನರು ವಾಸಿಸುತ್ತಿದ್ದಾರೆ. ಅವರನ್ನು ಕೂಡ ಒಕ್ಕಲೆಬ್ಬಿಸುವ ಹುನ್ನಾರವೂ ಅಡಗಿದೆ~ ಎಂದು ದೂರಿದರು.

ಈಗಾಗಲೇ, ಅರಣ್ಯ ಮಾನ್ಯತಾ ಹಕ್ಕು ಕಾಯ್ದೆಯಡಿ ಅರಣ್ಯವಾಸಿಗಳಿಗೆ ಭೂ ಹಕ್ಕುಪತ್ರ ನೀಡಲಾಗಿದೆ. ಸೂಕ್ಷ್ಮ ವಲಯ ಘೋಷಣೆಯಾದರೆ ಗಿರಿಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಆ ಭೂಮಿಯನ್ನು ಪುನಃ ಯಾರಿಗೂ ನೀಡುವಂತಿಲ್ಲ. ಹೀಗಾಗಿ, ಸೂಕ್ಷ್ಮ ವಲಯದ ಘೋಷಣೆಗೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬಾರದು. ಪರಾಮರ್ಶೆ ನಡೆಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ಬಸವಣ್ಣ ಮತ್ತು ಚಿಕ್ಕಮಹದೇವು, `ಸೂಕ್ಷ್ಮ ವಲಯ ಘೋಷಣೆಯಾದರೆ ಚಿಕ್ಕಪುಟ್ಟ ರೈತರು ಹೆಚ್ಚು ತೊಂದರೆ ಅನುಭವಿಸಲಿದ್ದಾರೆ. ವಾಣಿಜ್ಯ ಕೃಷಿಗೆ ತೊಂದರೆಯಾಗಲಿದೆ. ಇದರಿಂದ ರೈತರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಈ ಹಿನ್ನೆಲೆಯಲ್ಲಿ ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿ ಪರಿಸರ ಸೂಕ್ಷ್ಮ ವಲಯದ ಘೋಷಣೆಗೆ ಕ್ರಮಕೈಗೊಳ್ಳಬಾರದು~ ಎಂದು ಆಗ್ರಹಿಸಿದರು.

ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜೈಕೃಷ್ಣ ಪ್ರತಿಕ್ರಿಯಿಸಿ, `ಪರಿಸರ ಸೂಕ್ಷ್ಮ ವಲಯ ಘೋಷಣೆ ಸಂಬಂಧ ಸಭೆಯಲ್ಲಿ ಕೈಗೊಳ್ಳುವ ನಿರ್ಣಯವನ್ನು ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಕ್ರಮಕೈಗೊಳ್ಳಲಾ ಗುವುದು~ ಎಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಪಿ. ಮಹಾಲಿಂಗ ಸ್ವಾಮಿ ಸೇರಿದಂತೆ ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.

ಅನುಚಿತ ವರ್ತನೆ: ಶಿಕ್ಷಕನ ಅಮಾನತಿಗೆ ಆಗ್ರಹ
ತಾಲ್ಲೂಕಿನ ಹೋಬಳಿ ಕೇಂದ್ರದ ಸಮೀಪವಿರುವ ಮೊರಾರ್ಜಿ ದೇಸಾಯಿ ವಸತಿಶಾಲೆಯ ಮಕ್ಕಳನ್ನು ಈಚೆಗೆ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಪ್ರವಾಸಿ ಸ್ಥಳದಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಜತೆಗೆ, ವಸತಿಶಾಲೆಯಲ್ಲಿ ಅಡುಗೆ ಸಹಾಯಕರು ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಕೂಡಲೇ, ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಆರ್. ಮಹದೇವ್ ಒತ್ತಾಯಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, `ಈ ಕುರಿತು ನಮ್ಮ ಬಳಿ ಛಾಯಾಚಿತ್ರಗಳಿವೆ. ಕೂಡಲೇ, ತಪ್ಪಿತಸ್ಥ ಶಿಕ್ಷಕ ಮತ್ತು ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು~ ಎಂದು ಆಗ್ರಹಿಸಿದರು.

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ್ ಮಾತನಾಡಿ, `ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರವಾಸದ ವೇಳೆ ನಡೆದಿರುವ ಘಟನೆ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು~ ಎಂದು ಸಭೆಗೆ ತಿಳಿಸಿದರು.

ಮೋಟಾರ್ ದುರಸ್ತಿ: `ಕಿಲಗೆರೆ ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿಯ ಮೋಟಾರ್ ಕೆಟ್ಟುಹೋಗಿದೆ. ಇದರಿಂದ ಗ್ರಾಮದಲ್ಲಿ ನೀರಿಗೆ ತೊಂದರೆ ಎದುರಾಗಿದೆ. ಕೂಡಲೇ, ದುರಸ್ತಿಗೆ ಕ್ರಮಕೈಗೊಳ್ಳಬೇಕು. ಜತೆಗೆ, ರೈತರಿಗೆ ಕೃಷಿ ಇಲಾಖೆಯಿಂದ ಸಮರ್ಪಕವಾಗಿ ಪಿವಿಸಿ ಪೈಪ್‌ಗಳು ವಿತರಣೆಯಾಗುತ್ತಿಲ್ಲ~ ಎಂದು ಸದಸ್ಯ ಲೋಕೇಶ್ ದೂರಿದರು.

ಅಧ್ಯಕ್ಷೆ ಪದ್ಮಾ ಚಂದ್ರು ಮಾತನಾಡಿ, `ರೈತ ಸಂಪರ್ಕ ಕೇಂದ್ರದ ಮೂಲಕ ನೇರವಾಗಿ ರೈತರಿಗೆ ಪೈಪ್ ಒದಗಿಸಬೇಕು. ಮೋಟಾರ್ ದುರಸ್ತಿಗೂ ಕ್ರಮಕೈಗೊಳ್ಳಬೇಕು~ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT