ಚಾಮರಾಜನಗರ: ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಿತಿ ಸಭೆಯಲ್ಲಿ ಸಿದ್ಧಪಡಿಸಿರುವ ಫಲಾನುಭವಿಗಳ ಆಯ್ಕೆ ಪಟ್ಟಿಗೆ ಸಾಮಾನ್ಯ ಸಭೆಯಲ್ಲೂ ಅನುಮೋದನೆ ಪಡೆಯಬೇಕೆಂದು ಸೂಚಿಸಿರುವ ಪೌರಾಯುಕ್ತರನ್ನು ನಗರಸಭೆ ಸದಸ್ಯರು ತರಾಟೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.
ನಗರದ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ತುರ್ತುಸಭೆಯಲ್ಲಿ ಪೌರಾಯುಕ್ತ ಬಿ.ಡಿ. ಬಸವರಾಜಪ್ಪ ಅವರ ವಿರುದ್ಧ ಸದಸ್ಯರು ಹರಿಹಾಯ್ದರು. ಕೆಲವು ಸದಸ್ಯರು ಪೌರಾಯುಕ್ತರು ದಲಿತ ವಿರೋಧಿ ನಿಲುವು ತಳೆದಿದ್ದಾರೆ ಎಂದು ಆರೋಪಿಸಿ ವೇದಿಕೆ ಮುಂಭಾಗ ಧರಣಿ ನಡೆಸಿದರು. ಕೊನೆಗೆ, ಸದಸ್ಯರ ಮನವೊಲಿಸಿದ ನಂತರ ಧರಣಿ ಕೈಬಿಟ್ಟರು.
ಸದಸ್ಯರಾದ ಬಸವರಾಜು, ಸುರೇಶ್‌ನಾಯಕ, ಮಹೇಶ್ ಮಾತನಾಡಿ, ಈಗಾಗಲೇ ನಡೆದಿರುವ ಎಸ್‌ಸಿ, ಎಸ್‌ಟಿ ಸಮಿತಿ ಸಭೆಯಲ್ಲಿ ವಿವಿಧ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಸಮಿತಿ ಕೈಗೊಳ್ಳುವ ನಿರ್ಣಯವೇ ಅಂತಿಮವಾದುದು. ಆದರೆ, ಅನಗತ್ಯವಾಗಿ ಆ ಆಯ್ಕೆ ಪಟ್ಟಿಗೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಬೇಕೆಂದು ಪೌರಾಯುಕ್ತರು ಸೂಚಿಸಿರುವುದು ಸರಿಯಲ್ಲ ಎಂದು ದೂರಿದರು.
ಸದಸ್ಯರು ಸಲ್ಲಿಸುವ ಸಮಸ್ಯೆಗಳ ನಿವಾರಣೆಗೆ ಪೌರಾಯುಕ್ತರು ಮುಂದಾಗುತ್ತಿಲ್ಲ. ಹೀಗಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾದ ಅನುದಾನ ಸದ್ವಿನಿಯೋಗವಾಗುತ್ತಿಲ್ಲ. ಪೌರಾಯುಕ್ತರು ಅಧಿಕಾರ ಸ್ವೀಕರಿಸಿದ ದಿನದಿಂದಲೂ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂದು ಆರೋಪಿಸಿದರು.
ನಗರದ ವ್ಯಾಪ್ತಿ ಸ್ವಚ್ಛತೆ ಮಾಯವಾಗಿದೆ. ಮೂಲ ಸೌಲಭ್ಯ ಕಲ್ಪಿಸಲು ನಗರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಸಮಿತಿ ಅನುಮೋದಿಸಿರುವ ಫಲಾನುಭವಿ ಪಟ್ಟಿಯನ್ನು ಪರಿಗಣಿಸಿ ಸೌಲಭ್ಯ ಕಲ್ಪಿಸಬೇಕು. ನಾಗರಿಕರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷೆ ಭಾಗ್ಯಮ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸೆಲ್ವಿಬಾಬು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.