ADVERTISEMENT

ಬರಿದಾಗುತ್ತಿರುವ ಕೆರೆಕಟ್ಟೆಗಳು

ಕುಸಿದ ಅಂತರ್ಜಲ: ಸುವರ್ಣೆಯಲ್ಲೂ ಕಾಣದಾದ ಸಲಿಲ

ನಾ.ಮಂಜುನಾಥ ಸ್ವಾಮಿ
Published 22 ಮಾರ್ಚ್ 2018, 8:40 IST
Last Updated 22 ಮಾರ್ಚ್ 2018, 8:40 IST
ಕೆರೆ ನೀರಿನ ಆಸರೆಯಲ್ಲಿ ಫಸಲು ತೆಗೆಯಲು ಸಿದ್ಧತೆ ನಡೆಸುತ್ತಿರುವ ನೇಗಿಲು ಯೋಗಿ
ಕೆರೆ ನೀರಿನ ಆಸರೆಯಲ್ಲಿ ಫಸಲು ತೆಗೆಯಲು ಸಿದ್ಧತೆ ನಡೆಸುತ್ತಿರುವ ನೇಗಿಲು ಯೋಗಿ   

ಯಳಂದೂರು: ತಾಲ್ಲೂಕಿನಲ್ಲಿ 27 ಕೆರೆಗಳಿದ್ದರೂ, ನಶಿಸುತ್ತಿರುವ ಜಲ ಮೂಲಗಳು ಹಾಗೂ ನಿರ್ವಹಣೆ ಕೊರತೆಯಿಂದ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

‘20 ವರ್ಷದ ಹಿಂದೆ ತಾಲ್ಲೂಕಿನ ಎಲ್ಲೆಡೆ ಕೃಷಿ ಭೂಮಿಯಲ್ಲಿ 40 ಅಡಿ ಕೊಳವೆಬಾವಿ ಕೊರೆದರೆ ಜೀವಧಾಯಿ ಜಲಧಾರೆ ಉಕ್ಕಿ ಬರುತ್ತಿತ್ತು. ಈಗ 400 ಅಡಿ ದಾಟಿದರೂ ಅನ್ನದಾತನಿಗೆ ನೆಕ್ಕು ನೀರೇ ಗತಿಯಾಗಿದೆ. ಸುವರ್ಣಾವತಿ ನದಿ ಬತ್ತಿದ ನಂತರ ಬಹುತೇಕ ಪಟ್ಟಣಿಗರು ಹಣ ತೆತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಜೀವಜಲವನ್ನು ಮನೆ ತುಂಬಿಸಿ ಕೊಳ್ಳಬೇಕಾದ ದುಸ್ಥಿತಿಗೆ ತಲುಪಿದ್ದಾರೆ’ ಎನ್ನುವ ಪಟ್ಟಣದ ಹಿರಿಜೀವ ನಾಗಣ್ಣ ತಾಲ್ಲೂಕಿನ ನೀರಿನ ಬವಣೆಯನ್ನು ಬಿಚ್ಚಿಡುತ್ತಾರೆ.

ಹೌದು. ತಾಲ್ಲೂಕಿನ ಬಹುತೇಕ ಕೃಷಿ ಭೂಮಿಯಲ್ಲಿ ಒಣ ಪ್ರದೇಶ ಕಾಣಿಸಿಕೊಂಡಿದೆ. ಈ ಹಿಂದೆ ಇಲ್ಲೆಲ್ಲ ನೀರಾವರಿ ಬೆಳೆಗಳೇ ಜನರ ಕೈ  ಹಿಡಿಯುತ್ತಿದ್ದವು. ಆದರೆ, ಈಗ ಕೆರೆ–ಕಟ್ಟೆಗಳಲ್ಲಿ ಮೊದಲಿನಂತೆ ನೀರು ನಿಲ್ಲುತ್ತಿಲ್ಲ. ಕಬಿನಿ ಜಲಾಶಯದಿಂದ ನೀರನ್ನು ಹೊಳೆ, ಕಾಲುವೆ ಮೂಲಕ ಹರಿಸಿ ಕೆರೆಕಟ್ಟೆ ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದರೂ, ಬವಣೆ ಮಾತ್ರ ತಪ್ಪಿಲ್ಲ.

ADVERTISEMENT

ಜಲ ಸಂರಕ್ಷಣೆಗೆ ಆದ್ಯತೆ: ತಾಲ್ಲೂಕಿನಲ್ಲಿ ₹ 13.64 ಕೋಟಿ ವೆಚ್ಚದಲ್ಲಿ ಕೊಳವೆ ನೀರು ಯೋಜನೆಗೆ 95 ಕಾಮಗಾರಿಗಳು ಹಾಗೂ 195 ಕಿರು ನೀರು ಶುದ್ಧ ಕುಡಿಯುವ ನೀರು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ₹ 6 ಲಕ್ಷದಲ್ಲಿ ಕೆರೆ ಸಂಜೀವಿನಿ ಯೋಜನೆಗೆ ಆದ್ಯತೆ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆ ಕಾರ್ಯ ವ್ಯಾಪ್ತಿಯಲ್ಲಿ 6 ಕೆರೆಗಳಿಂದ 1,333 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಮಾಡಲಾಗಿದೆ. 148 ಕಾಮಗಾರಿಗೆ ₹ 1 ಕೋಟಿ ಖರ್ಚು ಮಾಡಲಾಗಿದ್ದು, ಹೊಸಕೆರೆ ಆಧುನೀಕರಣ, ದುರಸ್ತಿ, ಕೆರೆಗಳ ನೀರಿನ ಸಾಮರ್ಥ್ಯ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ.

ಕಬಿನಿ ಬಲದಂಡೆ ನಾಲೆ ಯಳಂದೂರು ಮತ್ತು ಕೊಳ್ಳೇಗಾಲ ವಿಭಾಗದಲ್ಲಿ 4,812 ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸಲು ₹ 11 ಕೋಟಿ ವ್ಯಯಿಸಲಾಗಿದೆ ಎಂಬುದು ಸಣ್ಣ ನೀರಾವರಿ ಮತ್ತು ಕಾವೇರಿ ನೀರಾವರಿ ನಿಗಮಗಳ ಅಂಕಿ–ಅಂಶಗಳ ಮಾಹಿತಿ.

ಕೃಷಿ ಅಧಿಕಾರಿ ದೊಡ್ಡೇಗೌಡ, ‘ತಾಲ್ಲೂಕಿನಲ್ಲಿ ನಾಲ್ಕುವರೆ ವರ್ಷಗಳಲ್ಲಿ ತೋಟಗಾರಿಕಾ ಇಲಾಖೆ ಸೂಕ್ಷ್ಮ ಹನಿ ನೀರಾವರಿ ಯೋಜನೆಯಡಿ 328 ಬೇಸಾಯಗಾರರಿಗೆ ₹ 15.4 ಕೋಟಿ ವೆಚ್ಚದಲ್ಲಿ 288 ಹೆಕ್ಟೇರ್‌ ತೋಟಗಾರಿಕಾ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಒದಗಿಸಿದೆ. ಕೃಷಿಭಾಗ್ಯ ಯೋಜನೆಯಡಿ ₹ 4.17 ಕೋಟಿ ವೆಚ್ಚದಲ್ಲಿ 400 ಫಲಾನುಭವಿಗಳು 395 ಕೃಷಿ ಹೊಂಡಗಳನ್ನು ಹೊಂದಿದ್ದಾರೆ. ಸೂಕ್ಷ್ಮ ನೀರಾವರಿ ಪ್ರಯೋಜನವನ್ನು 498 ಕೃಷಿಕರು ಪಡೆದಿದ್ದಾರೆ’ ಎಂದರು.

ಕೆರೆ ನೀರನ್ನು ಬಳಸಿಕೊಂಡು ಮುಸುಕಿನ ಜೋಳ ಹಾಗೂ ಅಲ್ಪಾವಧಿ ಬೆಳೆಗಳನ್ನು ಬೆಳೆದಿದ್ದೇವೆ. ಸದ್ಯ, ಕೆಸ್ತೂರು ಕೆರೆಯಲ್ಲಿ ಇನ್ನೂ ನೀರಿನ ಸಂಗ್ರಹವಿದೆ. ಹೂಳು ಮತ್ತು ಕಳೆಗಿಡಗಳೂ ಬೆಳೆದಿವೆ. ಮಳೆಗಾಲಕ್ಕೂ ಮುನ್ನ ಜಲ ಮೂಲಗಳನ್ನು ಶುದ್ಧಗೊಳಿಸಿದರೆ ಮತ್ತೊಂದು ಬೆಳೆ ತೆಗೆಯಬಹುದು ಎನ್ನುತ್ತಾರೆ ಕೃಷಿಕ ಮಹದೇವಪ್ಪ.
**
ಮಳೆ ನೀರು ನಿಲ್ಲಿಸಲು ಕಾಯಕ:
‘ಯಳಂದೂರು ತಾಲ್ಲೂಕು ಪ್ರಗತಿಶೀಲ ಜನತೆ’ ಹೆಸರಲ್ಲಿ ಸರ್ಕಾರದ ನೆರವಿಗೆ ಕಾಯದೆ ತಾಲ್ಲೂಕಿನ ಆಸಕ್ತ ಜನ ಸಮುದಾಯ 423 ಎಕರೆ ವ್ಯಾಪ್ತಿಯ ಯಳಂದೂರು ಕೆರೆಯನ್ನು ಅಭಿವೃದ್ಧಿಪಡಿಸಿದೆ. ₹ 2 ಲಕ್ಷ ವೆಚ್ಚದಲ್ಲಿ ಕೆರೆಯ ಹೂಳು ತೆಗೆದು ಮಳೆ ನೀರು ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ. ಪರಿಸರ ಪ್ರಿಯರು ದೇಣಿಗೆ ನೀಡಿ ಅಭಿವೃದ್ಧಿಪಡಿಸಲು ಅವಕಾಶ ಇದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಎಚ್‌.ಬಿ. ಮಹಾದೇವಸ್ವಾಮಿ.

**
ಕೆರೆಗಳ ಸ್ಥಿತಿ–ಗತಿ

ತಾಲ್ಲೂಕಿನಲ್ಲಿ ಕೆರೆಗಳ ವಿಸ್ತೀರ್ಣ 2,485 ಎಕರೆ ಪ್ರದೇಶ. 27 ದೊಡ್ಡ ಕೆರೆಗಳಿವೆ. ಆದರೆ, ಸದ್ಯ 4 ಕೆರೆಗಳಲ್ಲಿ ಮಾತ್ರ ನೀರಿದೆ.
ಅವನತಿಯಂಚಿನಲ್ಲಿರುವ ಪ‍್ರಮುಖ ಕೆರೆಗಳು

* ಅಗರ ಕೆರೆ 887 ಎಕರೆ
* ಮದ್ದೂರು ಕೆರೆ 640 ಎಕರೆ
* ಯರಿಯೂರು ಕೆರೆ 510 ಎಕರೆ
* ಹೊನ್ನೂರು ಕೆರೆ 140 ಎಕರೆ
* ಯರಂಗಬಳ್ಳಿ ಎಲೆಕೆರೆ 131 ಎಕರೆ
* ವೈ.ಕೆ.ಮೋಳೆ ಕೆರೆ 85 ಎಕರೆ
* ಅಂಬಳೆ ಕೆರೆ 34 ಎಕರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.