ADVERTISEMENT

ಬಿ.ಆರ್.ಹಿಲ್ಸ್: ಬೆಟ್ಟದಷ್ಟು ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 7:30 IST
Last Updated 14 ಮಾರ್ಚ್ 2012, 7:30 IST
ಬಿ.ಆರ್.ಹಿಲ್ಸ್: ಬೆಟ್ಟದಷ್ಟು ಸಮಸ್ಯೆ
ಬಿ.ಆರ್.ಹಿಲ್ಸ್: ಬೆಟ್ಟದಷ್ಟು ಸಮಸ್ಯೆ   

ಯಳಂದೂರು: ಅಕ್ರಮವಾಗಿ ಮಾರಾಟವಾಗುವ ಮದ್ಯ, ಪವಿತ್ರವಾದ ರಥಬೀದಿಯಲ್ಲಿ ಬಿದ್ದ ಮದ್ಯದ ಬಾಟಲಿಗಳು. ಎಲ್ಲೆಂದರಲ್ಲಿ ಹರಡಿರುವ ಪ್ಲಾಸ್ಟಿಕ್ ತ್ಯಾಜ್ಯ. ಬೀದಿ ಬದಿಯ ಚರಂಡಿಯಲ್ಲಿ ತುಂಬಿರುವ ಹೂಳು. ಕೆಟ್ಟು ನಿಂತಿರುವ ಕೈಪಂಪುಗಳು...

ಇದು ತಾಲ್ಲೂಕಿನ ಪುರಾಣಪ್ರಸಿದ್ಧ ಕ್ಷೇತ್ರ ಬಿಳಿಗಿರಿರಂಗನಬೆಟ್ಟದ ರಥದ ಬೀದಿಯಲ್ಲಿನ ನಿತ್ಯ ನರಕ ದರ್ಶನ.  ಹುಲಿ ಸಂರಕ್ಷಿತಾರಣ್ಯಕ್ಕೆ ಸೇರಿರುವ ಬಿ.ಆರ್. ಹಿಲ್ಸ್‌ನಲ್ಲಿ ಈಚೆಗೆ ಮದ್ಯಪಾನ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಬಳಕೆಯೂ ನಿರ್ಬಂಧಿತ. ಆದರೆ ಇದೆಲ್ಲಾ ಕೇವಲ ಘೋಷಣೆಗಳಿಗೆ ಸೀಮಿತವಾಗಿವೆ.

`ಬೀದಿ ಬದಿಯಲ್ಲಿರುವ ಮಂಟಪಗಳನ್ನು ರಥೋತ್ಸವದ ಸಮಯದಲ್ಲಿ ಅರವಟಿಗೆಗಳನ್ನಾಗಿ ಮಾಡಿಕೊಂಡು, ವಿವಿಧ ಗ್ರಾಮದ ಜನರು ಬಳಸುತ್ತಾರೆ. ಆದರೆ ನಂತರದ ದಿನಗಳಲ್ಲಿ ಇಲ್ಲಿಗೆ ಅಗಮಿಸುವ ಕೆಲವು ಕಿಡಿಗೇಡಿಗಳು ಇವನ್ನು ಕುಡಿಯುವ ತಾಣಗಳನ್ನಾಗಿ ಪರಿವರ್ತಿಸಿ, ರಾತ್ರಿ ವೇಳೆ ಗದ್ದಲ ಮಾಡುತ್ತಾರೆ. ಇದರಿಂದ ದೇವಸ್ಥಾನದ ಪಾವಿತ್ರ್ಯಕ್ಕೂ ಧಕ್ಕೆಯಾಗಿದೆ~ ಎಂದು ವಾಲ್ಮೀಕಿ ನಾಯಕರ ಸಂಘದ ಪದಾಧಿಕಾರಿಗಳು ದೂರುತ್ತಾರೆ.

ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಾಗಿದ್ದರೂ ಇದರ ಬಳಕೆ ಮಾತ್ರ ನಿಂತಿಲ್ಲ. ಹೀಗಾಗಿ ಈ ತ್ಯಾಜ್ಯ ವಿಲೇವಾರಿಯಾಗದೆ, ರಸ್ತೆಯ ಅಕ್ಕಪಕ್ಕದ ಚರಂಡಿಗಳನ್ನು ಆವರಿಸಿಕೊಳ್ಳುತ್ತಿದೆ. ಮಳೆಗಾಲ ಆರಂಭವಾದರೆ ಈ ತ್ಯಾಜ್ಯ ಕಾಡು ಸೇರಿ ವನ್ಯಜೀವಿಗಳ ಹೊಟ್ಟೆ ಸೇರುವ ಅಪಾಯವಿದೆ.

ಕೆಲವು ಕಡೆ ಕೈಪಂಪುಗಳು ದುರಸ್ತಿ ಕಾಣದೆ ನಿಂತಿವೆ. ಇದರಿಂದ ಜನರು ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಂಗಡಿ ನಾಗೇಂದ್ರ ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.