ADVERTISEMENT

ಬಿಆರ್‌ಟಿ: 150 ಚೀಲ ತ್ಯಾಜ್ಯ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 7:20 IST
Last Updated 1 ಏಪ್ರಿಲ್ 2011, 7:20 IST
ಬಿಆರ್‌ಟಿ: 150 ಚೀಲ ತ್ಯಾಜ್ಯ ಸಂಗ್ರಹ
ಬಿಆರ್‌ಟಿ: 150 ಚೀಲ ತ್ಯಾಜ್ಯ ಸಂಗ್ರಹ   

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ಅಭಿಯಾನ ಗುರುವಾರವೂ ಮುಂದುವರಿಯಿತು. ಜಿಲ್ಲಾಧಿಕಾರಿ ಕೆ. ಅಮರನಾರಾಯಣ ಅವರ ನೇತೃತ್ವದಡಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಶಾಲಾ ಮಕ್ಕಳು, ಏಟ್ರೀ ಸ್ವಯಂಸೇವಾ ಸಂಸ್ಥೆ, ಸೋಲಿಗ ಅಭಿವೃದ್ಧಿ ಯುವಕ ಸಂಘದ ಪದಾಧಿಕಾರಿಗಳು ಸ್ವಯಂಪ್ರೇರಿತರಾಗಿ ಅಭಿಯಾನ ದಲ್ಲಿ ಪಾಲ್ಗೊಂಡಿದ್ದರು. ಒಟ್ಟು 150 ಚೀಲ ತ್ಯಾಜ್ಯ ಸಂಗ್ರಹಿಸಲಾಯಿತು.

ಗಂಗಾಧರೇಶ್ವರ ದೇವಾಲಯದ ಆವರಣದಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇತರೇ ತ್ಯಾಜ್ಯ ಸಂಗ್ರಹಣೆಗೆ ಚಾಲನೆ ನೀಡಲಾಯಿತು. ಸುಮಾರು 200ಕ್ಕೂ ಹೆಚ್ಚು ಶಾಲಾ ಮಕ್ಕಳು, ನಿವೇದಿತ ನರ್ಸಿಂಗ್ ಶಾಲೆಯ  ವಿದ್ಯಾರ್ಥಿನಿಯರು, ಸ್ವಯಂಸೇವಾ ಸಂಸ್ಥೆ ಗಳ ಕಾರ್ಯಕರ್ತರು ತ್ಯಾಜ್ಯ ಸಂಗ್ರಹಿಸಿದರು. ಒಟ್ಟು ಹದಿನೈದು ತಂಡಗಳು ಗಿರಿಜನರ ಪೋಡುಗಳಾದ ಯರಕನಗದ್ದೆ, ಹೊಸಪೋಡು, ಮುತ್ತುಗದಗದ್ದೆ ಪೋಡಿನ ಆಸುಪಾಸು ಹಾಗೂ ಪ್ರವಾಸಿ ಮಂದಿರದ ರಸ್ತೆಯಲ್ಲಿ ಪ್ಲಾಸ್ಟಿಕ್ ಬಾಟಲಿ, ಕೈಚೀಲ ಇತರೇ ತ್ಯಾಜ್ಯ ವಸ್ತು ಸಂಗ್ರಹಿಸಿದರು. ಬಳಿಕ, ಗಂಗಾಧರೇಶ್ವರ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಲಾಯಿತು.

ಜಿಲ್ಲಾಧಿಕಾರಿ ಅಮರನಾರಾಯಣ ಮಾತನಾಡಿ, ಬಿಳಿಗಿರಿರಂಗನಾಥ ಸ್ವಾಮಿ ದೇವಸ್ಥಾನದ ಸುತ್ತ ಮುತ್ತ ಕೈಗೊಂಡ ಪ್ಲಾಸ್ಟಿಕ್ ಮುಕ್ತ ಅಭಿಯಾನದ ವೇಳೆ ಸುಮಾರು 12 ಟನ್ ತ್ಯಾಜ್ಯ ಸಂಗ್ರಹಿಸ ಲಾಗಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲಾಗಿದೆ. ಏ. 18ರಂದು ನಡೆಯುವ ಬಿಳಿಗಿರಿರಂಗನಬೆಟ್ಟದ ಜಾತ್ರೆ ವೇಳೆಯೂ ಪ್ಲಾಸ್ಟಿಕ್‌ರಹಿತವಾಗಿ ಮಹೋತ್ಸವ ನಡೆಸಲು ಕ್ರಮಕೈಗೊಳ್ಳಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಬಿಳಿಗಿರಿರಂಗನಬೆಟ್ಟದ ಪೋಡಿನ ಜನರು ಪ್ಲಾಸ್ಟಿಕ್ ವಸ್ತು ಖರೀದಿಯನ್ನು ಕಡಿಮೆ ಮಾಡಬೇಕು. ಪಾರ್ಥೇನಿಯಂ ಗಿಡ ಕಿತ್ತುಹಾಕಿ ಸ್ವಚ್ಛ ಪರಿಸರ ಉಳಿಸಿಕೊಳ್ಳಬೇಕು. ಶಾಲಾ ಬೇಸಿಗೆ ರಜೆಯ ಅವಧಿ ಮುಗಿದ ಬಳಿಕ ಮತ್ತೊಂದು ಸುತ್ತಿನ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ರೈಡ್ ಎ ಸೈಕಲ್ ಫೌಂಡೇಷನ್ ಸಂಸ್ಥೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮದ ವೇಳೆ ಜಿಲ್ಲಾಧಿಕಾರಿ ತಾವು ನೀಡಿದ್ದ ಭರವಸೆಯಂತೆ, ಇಬ್ಬರು ವಿದ್ಯಾರ್ಥಿಗಳಿಗೆ ತಲಾ 6,500 ರೂ ಮೌಲ್ಯದ ಸುಧಾರಿತ ಸೈಕಲ್ ಖರೀದಿಸಲು 13 ಸಾವಿರ ರೂ ಚೆಕ್ ವಿತರಿಸಿದರು.

ತಹಶೀಲ್ದಾರ್ ಹನುಮಂತರಾಯಪ್ಪ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಸ್. ಲಿಂಗಣ್ಣ, ವಿಜಿಕೆಕೆಯ ಅರುಣ್, ಸಿದ್ದವೀರಪ್ಪ, ನಿವೇದಿತ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜಲಜಾ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.