ADVERTISEMENT

ಬಿಸಿಲ ಝಳಕ್ಕೆ ‘ಗುಲ್‌ಮೊಹರ್‌’ ಚಪ್ಪರ

ಚಾಮರಾಜನಗರದ ಹೊರವಲಯಗಳಲ್ಲಿ ಕೆಂಪು ಹೂಗಳ ರಂಗು

ಅಮಿತ್ ಎಂ.ಎಸ್.
Published 5 ಜೂನ್ 2017, 7:37 IST
Last Updated 5 ಜೂನ್ 2017, 7:37 IST
ಕೆಂಪು ಹೂರಾಶಿಯಿಂದ ಕಂಗೊಳಿಸುತ್ತಿರುವ ಗುಲ್‌ಮೊಹರ್‌
ಕೆಂಪು ಹೂರಾಶಿಯಿಂದ ಕಂಗೊಳಿಸುತ್ತಿರುವ ಗುಲ್‌ಮೊಹರ್‌   

ಚಾಮರಾಜನಗರ: ಬಿಸಿಲ ಝಳಕ್ಕೆ ಅನೇಕ ತೋಟಗಳು ಹಸಿರು ಕಳೆದು ಕೊಂಡು ಬಣ್ಣಗೆಟ್ಟಿದ್ದರೆ, ಹಸಿರು ಮತ್ತು ಕೆಂಬಣ್ಣದ ಚಾದರ ಹೊದ್ದಂತೆ ಕಾಣುವ ಗುಲ್‌ಮೊಹರ್ ಮರಗಳು ಮುದ ನೀಡುತ್ತವೆ.

ನಗರದ ಯಾವ ಭಾಗದಲ್ಲಿ ಓಡಾಡಿ ದರೂ ಒಂದೆರಡು ಗುಲ್‌ಮೊಹರ್‌ ಮರ ಕಾಣಿಸುತ್ತದೆ. ಹೊರವಲಯದ ಅನೇಕ ಭಾಗಗಳಲ್ಲಿ ಕೆಂಪು ಹೂವಿನಿಂದ ತುಂಬಿ ಕೊಂಡ ಸಾಲು ಸಾಲು ಮರಗಳು ನೋಡುಗರಿಗೆ ವಿಶಿಷ್ಟ ಅನುಭವ ನೀಡು ತ್ತವೆ. ಬರದಿಂದ ಉಂಟಾಗಿರುವ ನೀರಿನ ತತ್ವಾರದ ಅರಿವು ತನಗೆ ಇಲ್ಲವೆಂಬಂತೆ ಗುಲ್‌ಮೊಹರ್‌ ಬೆಳೆದಿವೆ. ಬಿಸಿಲ ಝಳಕ್ಕೂ ಅದು ನಲುಗಿಲ್ಲ. ಬದಲಾಗಿ ತನ್ನ ನೆರಳಿನಲ್ಲಿ ತಂಪು ನೀಡುತ್ತದೆ.

ಏಪ್ರಿಲ್‌ನಿಂದ ಜೂನ್‌ ಅವಧಿ ಗುಲ್‌ ಮೊಹರ್‌ ಹೂ ಬಿಡುವ ಕಾಲ. ದಟ್ಟ ಹಸಿ ರಿನ ಪುಟ್ಟ ಎಲೆಗೊಂಚಲನ್ನು ಮರೆ ಮಾಚುವಂತೆ ಗಾಢವರ್ಣದ ಕೆಂಪು ಹೂವುಗಳು ಮರಗಳನ್ನು ಆವರಿಸಿವೆ. ಈ ಹೂಗಳು ಬೇಗ ಅರಳಿ, ಅಷ್ಟೇ ಬೇಗನೆ ಮುದುಡಿ ಉದುರುತ್ತವೆ. ಹೀಗಾಗಿ ರಸ್ತೆ ಗಳ ಮೇಲೆ ಹಲವೆಡೆ ಕೆಂಪುಹಾಸು ಹಾಸಿದಂತೆ
ಕಾಣಿಸುತ್ತದೆ. ಕೆಂಬಣ್ಣದ  ಜ್ವಾಲೆ ಯಂತೆ ಕಾಣಿಸುವುದರಿಂದ ಇದಕ್ಕೆ ‘ಫ್ಲೇಮ್‌ ಟ್ರೀ’ ಎಂದು ಸಹ ಕರೆಯುತ್ತಾರೆ. ಜ್ವಾಲೆಯ ಬಣ್ಣ ಹೊಂದಿದ್ದರೂ, ಅದಕ್ಕೆ ವಿರುದ್ಧವಾಗಿ ತಂಪು–ಕಂಪು ಸೂಸುವ ಗುಣ ಹೊಂದಿರುವುದರಿಂದ ಜನರಿಗೂ ಇದು ಅಚ್ಚುಮೆಚ್ಚು.

ADVERTISEMENT

ಬಿಸಿಲಿನಿಂದ ಬಸವಳಿದ ಜನ, ಜಾನುವಾರುಗಳಿಗೆ ಗುಲ್‌ಮೊಹರ್‌ ಮರಗಳು ನೆರಳು ನೀಡುತ್ತಿವೆ. ಅನೇಕರು ಅದರ ಚಿತ್ರಗಳನ್ನು ಬಗೆಬಗೆ ಕೋನ್‌ ಗಳಲ್ಲಿ ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದು ಸಂಭ್ರಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

‘ಬೇಸಿಗೆಯಲ್ಲಿ ಹೂಬಿಡುವ ಅಪ ರೂಪದ ಮರಗಳಲ್ಲಿ ಗುಲ್‌ಮೊಹರ್‌ ಕೂಡ ಒಂದು. ಈ ಮರಕ್ಕೆ ತೇವಾಂಶ ಕಡಿಮೆ ಸಾಕು. ಹೀಗಾಗಿ ಎಷ್ಟೇ ಬಿಸಿಲಿ ದ್ದರೂ ಅದು ತನ್ನ ಅಸ್ತಿತ್ವ ಉಳಿಸಿ ಕೊಳ್ಳು ತ್ತದೆ. ಸೂಕ್ತ ಅವಧಿಯಲ್ಲಿ ಹೂ ಬಿಡು ತ್ತದೆ’ ಎನ್ನುತ್ತಾರೆ ಅಶೋಕ ಪರಿಸರ ಸಂಶೋಧನಾ ಟ್ರಸ್ಟ್‌ನ (ಏಟ್ರೀ) ಸಂಶೋಧಕ ಸಿ. ಮಾದೇಗೌಡ.

ಗುಲ್‌ಮೊಹರ್‌ ಹೂವನ್ನು ಪೂಜೆ ಪುನಸ್ಕಾರಗಳಲ್ಲಿ ಬಳಸುವುದು ವಿರಳ. ಆದರೆ, ಇದರ ಎಲೆಗೊಂಚಲು ಮತ್ತು ಹೂವು ಅಲಂಕಾರಕ್ಕೆ ಯಥೇಚ್ಛವಾಗಿ ಬಳಕೆಯಾಗುತ್ತದೆ. ನಗರದ ಆಚೆಗೆ ನೆಲೆಸಿರುವ ಬುಡಕಟ್ಟು ಸಮುದಾಯ ದವರು ಪೂಜೆ ಮತ್ತು ಅಲಂಕಾರಕ್ಕೆ ಈ ಹೂವು ಹಾಗೂ ಎಲೆಯನ್ನು ಬಳಸು ತ್ತಾರೆ ಎಂದು ಅವರು ತಿಳಿಸಿದರು.

‘ಇದು ಮೇ ತಿಂಗಳಿನಲ್ಲಿ ಹೆಚ್ಚಾಗಿ ಅರಳುತ್ತದೆ. ಹೀಗಾಗಿ ಮೇ ಫ್ಲವರ್‌ ಎಂದೂ ಕರೆಯುತ್ತೇವೆ. ಆದಿವಾಸಿಗಳಲ್ಲಿ ಧಾರ್ಮಿಕ ಚಟುವಟಿಕೆಗಳು ಈ ಅವಧಿ ಯಲ್ಲಿ ಹೆಚ್ಚಾಗಿ ನಡೆಯುವುದರಿಂದ ಮೇ ಫ್ಲವರ್‌ಅನ್ನು ಎಲ್ಲ ಆಚರಣೆಗಳಿಗೂ ಬಳಸಿಕೊಳ್ಳುತ್ತಾರೆ’ ಎಂದು ವಿವ ರಿಸಿದರು. ‘ನಗರದ ಅಲ್ಲಲ್ಲಿ ರಸ್ತೆಗಳ ಬದಿ ಈ ಮರಗಳು ಕಾಣಿಸುತ್ತವೆ. ಹೊರ ವಲಯ ದಲ್ಲಿ ಇವುಗಳ ಪ್ರಮಾಣ ಹೆಚ್ಚಾ ಗಿದೆ. ಹೀಗಾಗಿ ಅಲ್ಲಿ ಓಡಾಡು ವಾಗ ಹೆಚ್ಚು ಖುಷಿಯಾಗುತ್ತದೆ. ನಗರದ ಎಲ್ಲ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಮರ ಗಳನ್ನು ನೆಟ್ಟರೆ ಅಂದ ಹೆಚ್ಚುತ್ತದೆ. ತಂಪೂ ಇರುತ್ತದೆ’ ಎಂದು ಸ್ಥಳೀಯ ನಿವಾಸಿ ರಾಕೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.