ADVERTISEMENT

ಬೇಡಿಕೆ ಈಡೇರಿಕೆಗೆ ಶುಶ್ರೂಷಕರ ಗಡುವು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 10:00 IST
Last Updated 3 ಫೆಬ್ರುವರಿ 2011, 10:00 IST

ಚಾಮರಾಜನಗರ: ಶುಶ್ರೂಷ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಜಿಲ್ಲಾ ಸರ್ಕಾರಿ ಶುಶ್ರೂಷಕರ ಸಂಘದಿಂದ ಮೆರವಣಿಗೆ ನಡೆಯಿತು. ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆವರಣದಿಂದ ಮೆರವಣಿಗೆ ನಡೆಸಿದ ಶುಶ್ರೂಷಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಟಿ. ಚಂದ್ರಶೇಖರ್‌ಗೆ ಮನವಿ ಸಲ್ಲಿಸಿದರು.

ಪ್ರತ್ಯೇಕ ಶುಶ್ರೂಷಕರ ನಿರ್ದೇಶನಾಲಯ ಸ್ಥಾಪನೆ ನೆನೆಗುದಿಗೆ ಬಿದ್ದಿದೆ. ಹಣ ಮಂಜೂ ರಾಗಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಕೂಡಲೇ, ನಿರ್ದೇಶನಾಲಯ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು. ರಾಜ್ಯದಲ್ಲಿ 3,200ಕ್ಕೂ ಹೆಚ್ಚು ಗುತ್ತಿಗೆ ಶುಶ್ರೂಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ರಾತ್ರಿಪಾಳಿಯಲ್ಲಿ ಸೇವೆ ಸಲ್ಲಿಸಬೇಕಿದೆ. ಇದಕ್ಕಾಗಿ 4 ಸಾವಿರ ರೂ ಭತ್ಯೆ ಹೆಚ್ಚಳ ಮಾಡಬೇಕು. ಶೇ. 15ರಷ್ಟು ಗಂಡಾಂತರ ಭತ್ಯೆ ಹೆಚ್ಚಿಸಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ವಿಸ್ತರಿಸಬೇಕು. ಸಾವಿರಾರು ಹುದ್ದೆ ಖಾಲಿಯಿವೆ. ಇದರಿಂದ ಆರೋಗ್ಯ ಸೇವೆ ಸಲ್ಲಿಸಲು ತೊಡ ಕಾಗಿದೆ. ಕೂಡಲೇ, ಭರ್ತಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಸತಿಗೃಹದ ಕೊರತೆಯಿಂದ ಶುಶ್ರೂಷಕರು ಕಂಗಾಲಾಗಿದ್ದಾರೆ. ಆಸ್ಪತ್ರೆ ಆವರಣದಲ್ಲೇ ವಸತಿಗೃಹಗಳ ನಿರ್ಮಾಣ ಮಾಡಬೇಕು. ಕೆಲವೊಮ್ಮೆ ರೋಗಿಗಳ ಸಂಬಂಧಿಕರು ಘರ್ಷಣೆಗೆ ಇಳಿಯುವ ಸಾಧ್ಯತೆ ಉಂಟು. ಆಸ್ಪತ್ರೆಗಳಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪ್ರಸ್ತುತ ಸಮವಸ್ತ್ರಕ್ಕೆ 180 ರೂ ನೀಡಲಾಗುತ್ತಿದೆ. ಮಾಸಿಕ 1 ಸಾವಿರ ರೂ ಭತ್ಯೆ ನೀಡಬೇಕು. ಗೆಜೆಟೆಡ್ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೆ ಹಾಲಿ ಇರುವ 15ದಿನದ ಸಂಬಳವನ್ನು 30 ದಿನದವರೆಗೆ ವಿಸ್ತರಿಸಬೇಕು. ಶುಶ್ರೂಷ ವೃಂದದ ನೇಮಕಾತಿ ನಿಯಮಾವಳಿ ನವೀಕರಿಸಬೇಕು.

ಶುಶ್ರೂಷಕರಿಗೆ ರಾಜ್ಯ ಪ್ರಶಸ್ತಿ ಕೊಡಬೇಕು. ಸರ್ಕಾರಿ ಶಾಲೆಗಳಲ್ಲಿ ತರಬೇತಿ ಪಡೆಯುವ ಶುಶ್ರೂಷ ವಿದ್ಯಾರ್ಥಿಗಳಿಗೆ 5 ಸಾವಿರ ರೂ ಮಾಸಿಕ ವೇತನ ನೀಡಬೇಕು. ಫೆ. 21ರೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಅನಿರ್ದಿ ಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಂಘದ ಅಧ್ಯಕ್ಷೆ ಉಷಾದೇವಿ, ಕಾರ್ಯದರ್ಶಿ ಎಲ್. ಮಹದೇವ್, ಭುವನೇಶ್ವರಿ, ಗುರುಪಾದ, ಬಸವಣ್ಣ, ಕುದ್ರತ್, ಉಮೇಶ್ ಸೇರಿದಂತೆ ಶುಶ್ರೂಷ ಸಿಬ್ಬಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.