ADVERTISEMENT

ಬ್ರಹ್ಮೋತ್ಸವಕ್ಕೆ ಜನ ಜಾತ್ರೆ, ಅಲ್ಲಲ್ಲಿ ಟ್ರಾಫಿಕ್ ಜಾಮ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2011, 8:35 IST
Last Updated 19 ಏಪ್ರಿಲ್ 2011, 8:35 IST
ಬ್ರಹ್ಮೋತ್ಸವಕ್ಕೆ ಜನ ಜಾತ್ರೆ, ಅಲ್ಲಲ್ಲಿ ಟ್ರಾಫಿಕ್ ಜಾಮ್
ಬ್ರಹ್ಮೋತ್ಸವಕ್ಕೆ ಜನ ಜಾತ್ರೆ, ಅಲ್ಲಲ್ಲಿ ಟ್ರಾಫಿಕ್ ಜಾಮ್   

ಯಳಂದೂರು: ತಾಲ್ಲೂಕಿನ ಪ್ರಸಿದ್ಧ ಪೌರಾಣಿಕ ಸ್ಥಳವಾದ ಬಿಳಿಗಿರಿರಂಗನಬೆಟ್ಟದಲ್ಲಿ ಸೋಮವಾರ ನಡೆದ ಬ್ರಹ್ಮ ರಥೋತ್ಸವಕ್ಕೆ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ವಾಹನಗಳೂ ಹೆಚ್ಚಾಗಿತ್ತು. ಕಿರಿದಾದ ಹಾಗೂ ತೀವ್ರ ತಿರುವು ಇರುವ ಸ್ಥಳದಲ್ಲಿ ವಾಹನ ಸವಾರರು ಪರದಾಡಿದರು. ಖಾಸಗಿ ವಾಹನಗಳಿಗೆ ಚೆಕ್ ಪೋಸ್ಟ್ ಬಳಿ ನಿಲುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳ ಆದೇಶ, ಭಕ್ತರಲ್ಲಿ ಕೆಲಕಾಲ ಗೊಂದಲ ಮೂಡಿಸಿತು. ಇದರಿಂದ ಬೇಸತ್ತ ಭಕ್ತರು ಪ್ರತಿಭಟನೆಗೆ ಮುಂದಾದಾಗ ಖಾಸಗಿ ವಾಹನಗಳನ್ನು ಬಿಡುವ ಸೂಚನೆ ನೀಡಲಾಯಿತು.

ಕೆಎಸ್‌ಆರ್‌ಟಿಸಿ ವತಿಯಿಂದ 100 ಬಸ್‌ಗಳನ್ನು ಓಡಿಸಲಾಗಿತ್ತು. ಬೆಟ್ಟಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಪಟ್ಟಣದ ಜಹಗೀರ್ದಾರ್ ಬಂಗಲೆ ಆವರಣದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣವನ್ನು ಮಾಡಲಾ ಗಿತ್ತು, ಬೆಳಗ್ಗಿನಿಂದಲೇ ಜನರ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಕೆಲವು ವಾಹನಗಳು ಪುರಾಣಿ ಪೋಡಿನ ರಸ್ತೆ, ಚೈನ್‌ಗೇಟ್, ಗವಿಬೋರೆಗಳಲ್ಲಿ ಹತ್ತಲಾಗದೇ ಪರದಾಡುತ್ತಿತ್ತು. ಇದರಿಂದ ಸಕಾಲಕ್ಕೆ ತಲುಪಲಾಗದೆ ತೇರು ಮುಗಿದ ನಂತರವೂ ಪ್ರಯಾಣಿಕರು ಬರುತ್ತಿದ್ದರು. ದ್ವಿಚಕ್ರ ವಾಹನವೂ ಸೇರಿದಂತೆ ಕೆಲವರು ಸೈಕಲ್ ಹಾಗೂ ನಡೆದುಕೊಂಡೇ ಬಂದು ದೇವರ ದರ್ಶನ ಪಡೆದರು.

ದೊಡ್ಡಜಾತ್ರೆಯಲ್ಲಿ ವ್ಯಾಪಾರ ಜೋರು
ಯಳಂದೂರು: ಬಿಳಿಗಿರಿರಂಗನಬೆಟ್ಟದಲ್ಲಿ ಸೋಮವಾರ ನಡೆದ ದೊಡ್ಡಜಾತ್ರೆಗೆ ನಿರೀಕ್ಷೆಗಿಂತ ಹೆಚ್ಚಾಗಿ ಜನರು ಆಗಮಿಸಿದ್ದರಿಂದ ರಥದ ಬೀದಿಯಲ್ಲಿ ಕಾಲಿಡಲು ಸ್ಥಳವಿರಲಿಲ್ಲ, ತೇರು ನೋಡಲು ಮಂಟಪಗಳ ಮೇಲೆ, ಮರಗಳ ಮೇಲೆ ಜನರು ನಿಂತು ದೇವರ ದರ್ಶನ ಪಡೆದರು. ಮುಂಜಾನೆಯಿಂದಲೇ ಆಗಮಿಸಿದ ಭಕ್ತಾದಿಗಳು ಸಂಜೆ ತನಕವೂ ಅಲ್ಲೇ ಇದ್ದರಿಂದ ಅಲ್ಲಿನ ವ್ಯಾಪಾರಿಗಳು ಭರ್ಜರಿ ವ್ಯಾಪಾರವಾಗುತ್ತಿತ್ತು. ಬಿಸಿಲ ಝಳ ಹೆಚ್ಚಾಗಿದ್ದರೂ ಸಹ ಭಕ್ತ ಸಮೂಹವು ಹಣ್ಣು ಜವನ ತೇರಿಗೆ ಎಸೆದು ಧೂಪ ಹಾಕಿದರು. ಅಲ್ಲಲ್ಲಿ ನಿರ್ಮಿಸಲಾಗಿದ್ದ ನೂರಾರು ಅರವಟ್ಟಿಗೆ ಗಳಲ್ಲಿ ಪ್ರಸಾದದ ವಿನಿಯೋಗ ನಡೆಯಿತು.

ನಂತರ ನಡೆದ ಮಂಟಪೋತ್ಸವದಲ್ಲಿ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಭಕ್ತಿಯಿಂದ ದೇವರ ನಾಮ ಹಾಡಿಕೊಂಡು ಅಲ್ಲಲ್ಲಿ ಧಾರ್ಮಿಕ ವಿಧಿಗಳನ್ನು ಪೂರೈಸಿ ದರು. ರಾತ್ರಿ ರಾಸೋತ್ಸವ ಹಾಗೂ ಮಂಗಳವಾರ ಹನುಮಂತೋತ್ಸವ ನಡೆಯಲಿವೆ. ದೇಗುಲದ ಸುತ್ತ ಹೂವು ಹಾಗೂ ದೀಪಗಳ ಅಲಂಕಾರ ಮಾಡಲಾಗಿತ್ತು. ಮಂಗಳವಾರ ಹಗಲು ಗರುಡೋತ್ಸವ ಸಂಜೆ ರಾಸಕ್ರೀಡೋ ತ್ಸವ ಹಾಗೂ ಪ್ರಹ್ಲಾದೋತ್ಸವ ನೆರವೇರಿಸಲಾಗುತ್ತದೆ.

ಭಕ್ತರು ತೇರಿಗೆ ಹಣ್ಣು ಜವನ ಎಸೆದು ಪುನೀತರಾದರು. ಕಡ್ಲೆಪುರಿ, ಸಿಹಿತಿಂಡಿಗಳೂ, ಮಕ್ಕಳ ಆಟಿಕೆ ಸಾಮಾನುಗಳು, ಹೂವು ಹಣ್ಣು, ಐಸ್‌ಕ್ರೀಂ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿತ್ತು. ಧಾರ್ಮಿಕ ವಿಧಿ ವಿಧಾನಗಳು ಇನ್ನೂ ಮುಂದುವರಿಯುವುದರಿಂದ ಕೆಲವು ಭಕ್ತರು ಅಲ್ಲೇ ಬೀಡುಬಿಟ್ಟಿದ್ದರು. ರಾತ್ರಿ ವೇಳೆ ಬೆಟ್ಟದ ಸುತ್ತಮುತ್ತ ಗುಡುಗು ಸಿಡಿಲುಗಳಿಂದ ಕೂಡಿದ ಮಳೆ ತಂಪೆರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.