ADVERTISEMENT

ಭರತನಾಟ್ಯದ ಆಕರ್ಷಣೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 7:55 IST
Last Updated 21 ಜನವರಿ 2011, 7:55 IST

ಯಳಂದೂರು: ಸಿನಿಮಾದಲ್ಲಿನ ಹಾಡಿಗೆ ಹೇಗೆ ಕುಣಿದರೂ ನೃತ್ಯ ಎಂಬುದು ಯುವ ಜನರ ಕಲ್ಪನೆ. ಹುಚ್ಚು ಹಿಡಿಸುವ ಅಬ್ಬರದ ಸಂಗೀತದ ನಡುವೆ ಮಕ್ಕಳನ್ನು ಶಾಲೆಯಲ್ಲಿ ಕುಣಿಸಿ ಸಂತೋಷ ಪಡುವ ಪಾಲಕರೆ ಹೆಚ್ಚು. ಆದರೆ ಭಾರತೀಯ ಕಲಾ ಸಂಸ್ಕೃತಿಯ ಭಾಗವಾದ ಭರತನಾಟ್ಯ ಕಲಿಕೆ ಮಕ್ಕಳಿಗೆ ಬೇಗ ಸಿದ್ಧಿಸುವುದಿಲ್ಲ. ಜಿಲ್ಲೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಊರೂರು ಸುತ್ತುತ್ತಿದ್ದಾರೆ ವಿದ್ವಾನ್ ಮಹೇಶ್.

ಪಟ್ಟಣದ ರಾಘವೇಂದ್ರ ಮಠದಲ್ಲಿ ಹೆಣ್ಣುಮಕ್ಕಳ ತಂಡ ಗೆಜ್ಜೆಕಟ್ಟಿ ಅಭ್ಯಾಸ ಮಾಡುವ ಶಬ್ದ ಕೇಳಿಬರುತ್ತದೆ. ಜೆಎಸ್‌ಎಸ್ ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಸುತ್ತೂರಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಲ್ಲಿ ತಾಲೀಮು ನಡೆಸುತ್ತಾರೆ.

ಜಿಲ್ಲೆಯ ಯಳಂದೂರು, ಹನೂರುಗಳಲ್ಲಿ ಶಾಲಾ ಮಕ್ಕಳು ಭರತನಾಟ್ಯದ ಬಗ್ಗೆ ಇವರಿಂದ ತರಬೇತಿ ಪಡೆಯುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳನ್ನೂ ಪಾಸು ಮಾಡಿದ್ದಾರೆ. ‘ಶಾಲೆಯಲ್ಲಿ ಕಲಿಯುವ ಸಂದರ್ಭದಲ್ಲಿ ಶಾಸ್ತ್ರೀಯ ನೃತ್ಯ ಕಲಿಯುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಕಲೆ ಸಿದ್ಧಿಸುತ್ತದೆ. ಏಕಾಗ್ರತೆ ವೃದ್ಧಿಸುವುದರಿಂದ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ. ದೇಹಕ್ಕೆ ವ್ಯಾಯಾಮವೂ ಸಿಗುವಂತಾಗುತ್ತದೆ’ ಎನ್ನುತ್ತಾರೆ ಶಿಕ್ಷಕಿ ನಾಗಮಂಜುಳಾ.

‘ಭರತನಾಟ್ಯ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟಿದೆ. ಭರತಮುನಿಯಿಂದ ಯೋಜಿತ ರೀತಿಯಲ್ಲಿ ಬೆಳೆದಿದೆ. ಪುರುಷರೇ ಸೃಷ್ಟಿಸಿದ ಈ ನೃತ್ಯವನ್ನು ಹೆಣ್ಣು ಮಕ್ಕಳಷ್ಟೇ ಅಲ್ಲದೆ ಗಂಡು ಮಕ್ಕಳೂ ಕಲಿಯಬೇಕು’ ಎನ್ನುತ್ತಾರೆ ನೃತ್ಯ ಶಿಕ್ಷಕ ಮಹೇಶ್.
ಮಹೇಶ್ ಅವರು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಆಯೋಜಿಸುವ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ದೆಹಲಿಯ ಕರ್ನಾಟಕ ಭವನ. ಚೆನ್ನೈ, ಪುಣೆ, ಹೈದರಾಬಾದ್‌ನಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಮಹೇಶ್‌ಗೆ ತಾಲ್ಲೂಕಿನಲ್ಲೂ ಶಾಸ್ತ್ರೀಯ ಪ್ರಕಾರ ಪ್ರಚಾರ ಮಾಡುವ ಆಸೆ. ಜಿಲ್ಲೆಯ ಮಕ್ಕಳಿಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಶಾರದ ನೃತ್ಯ ಶಾಲೆ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಈ ಭಾನುವಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.