ADVERTISEMENT

ಭಾನುವಾರವೂ ಪ್ರಚಾರದ ಅಬ್ಬರ

ಬಿಜೆಪಿ ಪರ ಪ್ರಚಾರಕ್ಕೆ ಬಂದ ಶ್ರೀನಿವಾಸಪ್ರಸಾದ್

​ಪ್ರಜಾವಾಣಿ ವಾರ್ತೆ
Published 7 ಮೇ 2018, 8:37 IST
Last Updated 7 ಮೇ 2018, 8:37 IST
ಚಾಮರಾಜನಗರ ತಾಲ್ಲೂಕಿನ ಕಾಳನಹುಂಡಿ ಗ್ರಾಮದಲ್ಲಿ ಬಿಎಸ್‍ಪಿ, ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎ.ಎಂ.ಮಲ್ಲಿಕಾರ್ಜುನಸ್ವಾಮಿ (ಆಲೂರುಮಲ್ಲು) ಅವರು ತಮ್ಮ ಬೆಂಬಲಿಗರ ಜತೆಯಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು
ಚಾಮರಾಜನಗರ ತಾಲ್ಲೂಕಿನ ಕಾಳನಹುಂಡಿ ಗ್ರಾಮದಲ್ಲಿ ಬಿಎಸ್‍ಪಿ, ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎ.ಎಂ.ಮಲ್ಲಿಕಾರ್ಜುನಸ್ವಾಮಿ (ಆಲೂರುಮಲ್ಲು) ಅವರು ತಮ್ಮ ಬೆಂಬಲಿಗರ ಜತೆಯಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು   

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರವೂ ಚುನಾವಣಾ ಪ್ರಚಾರದ ಭರಾಟೆ ನಿಂತಿರಲಿಲ್ಲ. ಅಭ್ಯರ್ಥಿಗಳಿಗೆ ವಿಶ್ರಾಂತಿ ಎಂಬುದಿರಲಿಲ್ಲ. ಎಲ್ಲೆಲ್ಲೂ ಪ್ರಚಾರದ ರಂಗೇ ಕಂಡು ಬರುತ್ತಿತ್ತು. ಕೆಲವು ರಸ್ತೆಗಳಲ್ಲಿ ಎರಡು, ಮೂರು ಪಕ್ಷಗಳ ಪರ ಧ್ವನಿವರ್ಧಕಗಳ ಪ್ರಚಾರ ನಡೆದು, ಸಾರ್ವಜನಿಕರಿಗೆ ಕಿರಿಕಿರಿಯಾಯಿತು.

ಚಾಮರಾಜನಗರ ತಾಲ್ಲೂಕಿನ ಕಾಳನಹುಂಡಿ ಗ್ರಾಮದಲ್ಲಿ ಬಿಎಸ್‍ಪಿ, ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಎ.ಎಂ.ಮಲ್ಲಿಕಾರ್ಜುನಸ್ವಾಮಿ (ಆಲೂರುಮಲ್ಲು) ಅವರು ತಮ್ಮ ಬೆಂಬಲಿಗರ ಜತೆಯಲ್ಲಿ ಮನೆಮನೆಗೆ ತೆರಳಿ ಬಿರುಸಿನ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಈಗಾಗಲೇ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಲಾಗುತ್ತಿದ್ದು, ಮತದಾರರು ತಮ್ಮ ಕಡೆ ಒಲವು ತೋರುತ್ತಿದ್ದಾರೆ. ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ಎಂ.ಕೃಷ್ಣಮೂರ್ತಿ, ಜಿಲ್ಲಾ ಅಧ್ಯಕ್ಷ ಆಪ್ತ ಕಾರ್ಯದರ್ಶಿ ಸಿ.ಕೆ.ರಂಗರಾಮು, ನಗರ ಘಟಕ ಅಧ್ಯಕ್ಷ ಜಿ.ಎಂ.ಶಂಕರ್, ಗಂಗವಾಡಿ ಗಿರೀಶ್, ಬಂಗಾರ ಉಪ್ಪಾರ, ಬಿಎಸ್‍ಪಿ ಬ್ಯಾಡಮೂಡ್ಲು ಬಸವಣ್ಣ, ಗ್ರಾ.ಪಂ.ಸದಸ್ಯ ನಂಜುಂಡಸ್ವಾಮಿ, ಪಿ.ಮಹದೇವಪ್ಪ, ಸಿದ್ದರಾಜು, ಬಸವರಾಜು ಇತರರು ಹಾಜರಿದ್ದರು.

ಶಾಸಕರಿಂದ ಬಿರುಸಿನ ಮತಯಾಚನೆ: ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಸಿ.ಪುಟ್ಟರಂಗಶೆಟ್ಟಿ ರಾಮಸಮುದ್ರದ ವಿವಿಧ ಬಡಾವಣೆಗಳಿಗೆ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಮನೆ-ಮನೆಗೆ ತೆರಳಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ವಿವಿಧ ಯೋಜನೆಗಳಡಿ ಅನುದಾನ ತಂದು ಪ್ರತಿಯೊಂದು ವಾರ್ಡುಗಳಲ್ಲೂ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಇದು ಪೂರ್ಣವಾಗಲು ಮತ್ತೊಂದು ಅವಧಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಉಮೇಶ್, ನಗರಸಭೆ ಅಧ್ಯಕ್ಷೆ ಶೋಭಾ ಪುಟ್ಟಸ್ವಾಮಿ, ಉಪಾಧ್ಯಕ್ಷ ರಾಜಪ್ಪ, ಮಾಜಿ ಅಧ್ಯಕ್ಷರಾದ ನಂಜುಂಡಸ್ವಾಮಿ, ಸುರೇಶ್ ನಾಯಕ, ಸದಸ್ಯರಾದ ಚೆಂಗುಮಣಿ, ಮಹೇಶ್ ಉಪ್ಪಾರ್, ಗೋವಿಂದು, ಆರ್.ಪಿ.ನಂಜುಂಡಸ್ವಾಮಿ ಇದ್ದರು.

ಬಿಜೆಪಿಗೆ ಸೇರ್ಪಡೆಗೊಂಡ ಕಾರ್ಯಕರ್ತರು: ಬ್ಯಾಡಮೂಡ್ಲು ಹಾಗೂ ದೊಳ್ಳೀಪುರ ಗೌತಮ್ ಕಾಲೋನಿಯಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಂಗಲಶಿವಕುಮಾರ್, ಮುಖಂಡ ಹನುಮಂತಶೆಟ್ಟಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಜಿಲ್ಲಾ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಂಗಲಶಿವಕುಮಾರ್ ಪಕ್ಷಕ್ಕೆ ನೂತನವಾಗಿ ಸೇರ್ಪಡೆಯಾದ ಕಾರ್ಯಕರ್ತರಿಗೆ ಪಕ್ಷದ ಶಲ್ಯ ಹಾಕಿ ಸ್ವಾಗತಿಸಿ ಬರಮಾಡಿಕೊಂಡರು.

ಬಿಜೆಪಿ ಮುಖಂಡ ಹನುಮಂತಶೆಟ್ಟಿ ಮಾತನಾಡಿ, ‘ಹರದನಹಳ್ಳಿ ಜಿ.ಪಂ. ಕ್ಷೇತ್ರದಲ್ಲಿ ಉಪ್ಪಾರರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸೇರ್ಪಡೆಯಾಗುತ್ತಿರುವುದು ಬಹಳ ಸಂತಸ ತಂದಿದೆ. ಹೊಸದಾಗಿ ಬಿಜೆಪಿ ಸೇರ್ಪಡೆಯಾಗಿರುವ ಉಪ್ಪಾರ ಸಮುದಾಯದ ಯುವಕರು ಒಮ್ಮತದಿಂದ ಬಿಜೆಪಿ ಬೆಂಬಲಿಸುವ ಮೂಲಕ ಪಕ್ಷದ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಜಿ.ಪಂ.ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ವಕ್ತಾರ ನಿಜಗುಣರಾಜ್, ಮಂಡಲ ಅಧ್ಯಕ್ಷ ಬಸವಣ್ಣ, ತಾ.ಪಂ.ಸದಸ್ಯ ಮಹದೇವಶೆಟ್ಟಿ, ಪುಟ್ಟರಾಜು, ಗ್ರಾ.ಪಂ.ಸದಸ್ಯ ಕುಮಾರ್ ಹಾಜರಿದ್ದರು.

ಪಕ್ಷೇತರ ಅಭ್ಯರ್ಥಿ ಚಿನ್ನಸ್ವಾಮಿ ಮತಯಾಚನೆ: ಚಾಮರಾಜನಗರ ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿ ಎಂ.ಚಿನ್ನಸ್ವಾಮಿ ಭಾನುವಾರ ಮನೆ ಮನೆಗೆ ತೆರೆಳಿ ಮತಯಾಚನೆ ಮಾಡಿದರು.

ಶ್ರೀನಿವಾಸಪ್ರಸಾದ್ ಬಿಜೆಪಿ ಪರ ಮತಯಾಚನೆ

ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುತ್ತಿಗೆ ಗ್ರಾಮದ ಬಳಿ ಭಾನುವಾರ ವಿ.ಶ್ರೀನಿವಾಸಪ್ರಸಾದ್ ಅವರು ಬಿಜೆಪಿ ಪರ ಮತಯಾಚಿಸಿದರು.

ಎರಡು ಬಾರಿ ಶಾಸಕರಾಗಿರುವ ಪುಟ್ಟರಂಗಶೆಟ್ಟಿ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ. ಇದು ಜಿಲ್ಲಾ ಕೇಂದ್ರ ಸಹ ಆಗಿದೆ. ಬೆಳಿಗ್ಗೆ ಚಾಮರಾಜನಗರಕ್ಕೆ ಬರುವುದು ಸಂಜೆ ಮನೆಗೆ ಹೋಗುವುದು ಇದೆ ಶಾಸಕರ ಕೆಲಸ, ಒಂದು ದಿನವು ಸಹ ಅಧಿವೇಶನಗಳಲ್ಲಿ ಚಾಮರಾಜನಗರದ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಇಂತಹ ಶಾಸಕರು ನಮಗೆ ಬೇಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಉತ್ತಮ ವ್ಯಕ್ತಿಯಾಗಿದ್ದಾರೆ ಹೆಚ್ಚು ವಿಚಾರವಂತರಾಗಿದ್ದಾರೆ ಆದ್ದರಿಂದ ಈ ಬಾರಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜನತೆ ಮಲ್ಲಿಕಾರ್ಜುನಪ್ಪ ಅವರಿಗೆ ಹೆಚ್ಚು ಮತಗಳನ್ನು ನೀಡಿ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಸಭೆಗೆ ಆಗಮಿಸಿದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಸ್ವಾಗತಿಸಿದರು.

ಇಂದು ಜಿಲ್ಲೆಗೆ ಸಿಎಂ‌

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 7ರಂದು ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಸುವರು. ಹನೂರಿನಲ್ಲಿ ಬೆಳಿಗ್ಗೆ 11ಕ್ಕೆ ಮಹದೇಶ್ವರ ಕ್ರೀಡಾಂಗಣದಲ್ಲಿ, ಕೊಳ್ಳೇಗಾಲದಲ್ಲಿ ಮಧ್ಯಾಹ್ನ 1 ಗಂಟೆಗೆ ನ್ಯಾಷನಲ್ ಮಿಡ್ಲಿ ಶಾಲೆ ಆವರಣದಲ್ಲಿ, ಚಾಮರಾಜನಗರದಲ್ಲಿ ಮಧ್ಯಾಹ್ನ 2.30 ಗಂಟೆಗೆ ಮಾರಮ್ಮನ ದೇವಸ್ಥಾನದ ಬಳಿ, ಗುಂಡ್ಲು‍ಪೇಟೆಯಲ್ಲಿ ಸಂಜೆ 5 ಗಂಟೆಗೆ ನೆಹರೂ ಉದ್ಯಾನದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.