ADVERTISEMENT

ಭಾರತೀಯ ಮೌಲ್ಯಾಧಾರಿತ ಶಿಕ್ಷಣಕ್ಕೆ ಶ್ರೇಷ್ಠ ಸ್ಥಾನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 6:25 IST
Last Updated 7 ಅಕ್ಟೋಬರ್ 2011, 6:25 IST

ಚಾಮರಾಜನಗರ: `ಭಾರತದ ಮೌಲ್ಯಾಧಾರಿತ ಶಿಕ್ಷಣ ಪದ್ಧತಿ ವಿಶ್ವದಲ್ಲಿಯೇ ಶ್ರೇಷ್ಠವಾದುದು~ ಎಂದು ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ಹೇಳಿದರು.

ಇತ್ತೀಚೆಗೆ ದುಬೈನಲ್ಲಿ ಜೆಎಸ್‌ಎಸ್ ಪ್ರೈವೇಟ್ ಶಾಲೆ ಉದ್ಘಾಟಿಸಿ ಅವರು ಮಾತನಾಡಿದರು.
2030ರ ವೇಳೆಗೆ ಭಾರತ ಸಂಪೂರ್ಣವಾಗಿ ಸಾಕ್ಷರತೆ ಸಾಧಿಸಲಿದೆ. ಜಗತ್ತಿನಲ್ಲಿಯೇ ಪ್ರಭಾವಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದ ಅವರು, ಜೆಎಸ್‌ಎಸ್ ಮಹಾ ವಿದ್ಯಾಪೀಠ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದುಬೈನ ಜನರ ಅಗತ್ಯತೆ ಅರಿತು ಶಿಕ್ಷಣ ಸಂಸ್ಥೆ ತೆರೆಯಲಾಗಿದೆ. ನೈತಿಕ ತಳಹದಿ ಮೇಲೆ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಈ ಶಾಲೆಯಲ್ಲಿ ಭಾರತೀಯ ಮತ್ತು ಅರಬ್ ಸಂಸ್ಕೃತಿ ಅಳವಡಿಸಿಕೊಂಡು ಶಿಕ್ಷಣ ಕಲಿಕೆಗೆ ಒತ್ತು ನೀಡಲಾಗುವುದು ಎಂದರು.

ಯುಎಇನಲ್ಲಿರುವ ಭಾರತೀಯ ರಾಯಭಾರಿ ಎಂ.ಕೆ. ಲೋಕೇಶ್ ಮಾತನಾಡಿ, ಭಾರತ ಮಾನವ ಸಂಪತ್ತಿನ ಕಾರಣದಿಂದ ಜಗತ್ತಿನ ಆರ್ಥಿಕ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸಿದೆ. ಭಾರತದಲ್ಲಿ ಉತ್ತಮ ಶೈಕ್ಷಣಿಕ ವ್ಯವಸ್ಥೆಯಿದೆ ಎಂದು ಹೇಳಿದರು.

ದುಬೈನ ಕೆಎಚ್‌ಡಿಎ ಅಧ್ಯಕ್ಷ ಡಾ.ಅಬ್ದುಲ್ ಆಲ್‌ಕರಮ್ ಮಾತನಾಡಿ, `ದುಬೈನಲ್ಲಿ ಕಳೆದ 5 ವರ್ಷದಡಿ ಭಾರತೀಯ ಮೂಲದ 23 ಶಾಲೆಗಳು ಪ್ರಾರಂಭವಾಗಿವೆ. ಇವುಗಳಲ್ಲಿ 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೆಎಸ್‌ಎಸ್ ವಿದ್ಯಾಪೀಠ ಕಳೆದ 4 ವರ್ಷದಲ್ಲಿ 2 ಶಾಲೆ ತೆರೆದು ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.

ದುಬೈನ ಶಿಕ್ಷಣ ಇಲಾಖೆಯ ಡೆಪ್ಯೂಟಿ ಸಚಿವ ಹುಮೀದ್ ಮಹಮ್ಮದ್ ಒಬೆದ ಅಲ್ ಖತೌಮಿ, ಭಾರತದ ಐಸಿಎಸ್‌ಇ ಅಧ್ಯಕ್ಷ ಡಾ.ಜೋಸ್ ಐಕಾರ್, ರಾಜ್ಯ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ, ಮೈಸೂರಿನ ಮಾಜಿ ಮೇಯರ್ ವಾಸು, ದುಬೈನ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಿಇಒ ಕಲ್ಲೂರು ಗುರುಸ್ವಾಮಿ ಇತರರು ಹಾಜರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.