ADVERTISEMENT

`ಭೂಮಿಗೆ ಅಗತ್ಯ ಪೋಷಕಾಂಶ ಒದಗಿಸಿ'

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 8:25 IST
Last Updated 5 ಜೂನ್ 2013, 8:25 IST

ಯಳಂದೂರು: ರೈತರು ತಾವು ಬೆಳೆಯುವ ಬೆಳೆಗಳಿಗೆ ಅಗತ್ಯವಿದ್ದಷ್ಟು ಮಾತ್ರ ಪೋಷಕಾಂಶಗಳನ್ನು ಒದಗಿಸುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಂಗಾಮಣಿ ರೇವಣ್ಣ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಸ್ಥಳೀಯ ಕೃಷಿ ಇಲಾಖೆಯ ಭೂ ಚೇತನ ಯೋಜನೆಯಡಿಯಲ್ಲಿ ಹಮ್ಮಿಕೊಂಡ ಲಘು ಪೋಷಕಾಂಶಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ರೈತರು ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ಭೂಮಿಗೆ ಹೆಚ್ಚಿನ ರಸಗೊಬ್ಬರಗಳನ್ನು ಬಳಕೆ ಮಾಡುತ್ತಾರೆ. ಇದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿ ಇಳುವರಿಯೂ ಕಡಿಮೆಯಾಗುವ ಜೊತೆಗೆ ಆರ್ಥಿಕ ಸಂಕಷ್ಟಕ್ಕೂ ಗುರಿಯಾಗುವ ಸಾಧ್ಯತೆಗಳು ಹೆಚ್ಚು.

ರೈತರಿಗೆ ಈ ಬಗ್ಗೆ ಮಾಹಿತಿ ನೀಡಲು ಕೃಷಿ ಇಲಾಖೆಯು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕಿ ಸುಂದ್ರಮ್ಮ ಮಾತನಾಡಿ, ರೈತರಲ್ಲಿ ಲಘು ಪೋಷಕಾಂಶಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೂ. 3 ರಿಂದ 7ರ ವರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚಾರಿ ವಾಹನಗಳಲ್ಲಿ ಸಂಚರಿಸಿ ಶೇ 50ರ ರಿಯಾಯ್ತಿ ದರದಲ್ಲಿ ಜಿಪ್ಸಂ, ಜಿಂಕ್ ಸಲ್ಫೇಟ್ ಹಾಗೂ ಬೋರಾಕ್ಸ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ರೈತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಮಚಂದ್ರ, ಸದಸ್ಯರಾದ ಮಹೇಶ್‌ಕುಮಾರ್, ಕೆ.ಪಿ. ಶಿವಣ್ಣ, ಸಹಾಯಕ ಕೃಷಿ ಅಧಿಕಾರಿ ಎ.ವೆಂಕಟರಂಗಶೆಟ್ಟಿ, ವಿರೂಪಾಕ್ಷ, ಶಿವಶಂಕರ್, ಕೃಷ್ಣಮೂರ್ತಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.