ADVERTISEMENT

ಮಣ್ಣಿನ ರಸ್ತೆ: ಕಸ ತುಂಬಿದ ಚರಂಡಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 3:55 IST
Last Updated 18 ಜುಲೈ 2012, 3:55 IST

ಕೊಳ್ಳೇಗಾಲ: ಚರಂಡಿಯ ತ್ಯಾಜ್ಯನೀರು ಹೊರಹೋಗಲು ವ್ಯವಸ್ಥೆ ಇಲ್ಲವಾದ್ದರಿಂದ ಮನೆಗಳ ಮುಂಭಾಗವೇ ಕೊಚ್ಚೆಗುಂಡಿ ನಿರ್ಮಾಣವಾಗಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಭೀತಿ ಜನತೆಯಲ್ಲಿ ಆವರಿಸಿದೆ.

ಇದು ಅಣಗಳ್ಳಿ ಗ್ರಾಮದಲ್ಲಿರುವ ಸ್ಥಿತಿ. ಈ ಗ್ರಾಮ ಮೂಲ ಸೌಕರ್ಯದಿಂದ ವಂಚಿತವಾಗಿದೆ. ಕೊಳ್ಳೇಗಾಲ ಪಟ್ಟಣ ಹೊಂದಿ ಕೊಂಡಂತೆ ಬೆಂಗಳೂರು ರಸ್ತೆಯಲ್ಲಿರುವ ಈ ಗ್ರಾಮದ ಕೆಲವು ಕಡೆ ತೆರೆದ ಚರಂಡಿ ವ್ಯವಸ್ಥೆ ಇದೆ. ಪಕ್ಕದಲ್ಲಿಯೇ ಗಿಡಗಂಟಿ ಆವರಿಸಿಕೊಂಡಿವೆ.

ಕಸ-ಕಡ್ಡಿ ಕಟ್ಟಿಕೊಂಡು ನೀರು ಹೊರಹೋಗಲು ತೊಂದರೆ ಯಾಗಿದೆ. ಗ್ರಾಮದ ಸುತ್ತಲೂ ಜಮೀನು ಇವೆ. ಚರಂಡಿ ನೀರು ಸರಾಗವಾಗಿ ಹೊರಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಕೊಚ್ಚೆ ನೀರು ಮನೆಗಳಿಗೇ ನುಗ್ಗುವುದು ಸಾಮಾನ್ಯ ವಾಗಿಬಿಟ್ಟಿದೆ. ಕೊಚ್ಚೆನೀರು ಹೊರಹಾಕಲು ಪರದಾಡುವ ಸ್ಥಿತಿ ಇದೆ. ಕೆಲವು ಕಡೆಗಳಲ್ಲಿ ರಸ್ತೆಯ ಮಧ್ಯದಲ್ಲೇ ಕೊಚ್ಚೆ ನೀರು ಹರಿಯುತ್ತದೆ. ಈ ನೀರಿನಲ್ಲಿಯೇ ಮಹಿಳೆಯರು ಮಕ್ಕಳು ಓಡಾಡುವ ಸ್ಥಿತಿ ಇದೆ.

ಕೆಲವು ಬೀದಿಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ, ಈ ಚರಂಡಿಗಳಲ್ಲಿ ತುಂಬಿತುಳುಕುತ್ತಿರುವ ಕಸ ತೆಗೆಯದ ಕಾರಣ ಕೊಳಚೆಗುಂಡಿಯಾಗಿ ಮಾರ್ಪಟ್ಟು ಸೊಳ್ಳೆ ಸಂತತಿ ಹೆಚ್ಚಾಗಿದೆ. ರಸ್ತೆಗಳು ಮಣ್ಣಿನ ರಸ್ತೆಗಳಾಗಿದ್ದು ಹಳ್ಳಕೊಳ್ಳಗಳಿಂದ ಕೂಡಿದೆ.

ಈ ಗ್ರಾಮ ಪಟ್ಟಣ ವ್ಯಾಪ್ತಿಗೆ ಸೇರಿದ್ದರೂ ಸಹ ಇಲ್ಲಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಗರಸಭೆ ಮುಂದಾ ಗಿಲ್ಲ. ಈ ಗ್ರಾಮದಲ್ಲಿ ಚರಂಡಿಯದ್ದೇ ಮುಖ್ಯ ಸಮಸ್ಯೆಯಾಗಿದ್ದು, ಇದರ ಸ್ವಚ್ಛತೆ ಮತ್ತು ಚರಂಡಿ ನೀರು ಗ್ರಾಮದಿಂದ ಹೊರಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂಬುದು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರ ಒತ್ತಾಯ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.