ADVERTISEMENT

ಮನೆಗೆ ನುಗ್ಗಿದ ನೀರು, ಕುಸಿದ ಗೋಡೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 7:12 IST
Last Updated 12 ಅಕ್ಟೋಬರ್ 2017, 7:12 IST

ಯಳಂದೂರು:ಯಳಂದೂರು ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಎಡಬಿಡದೆ ಸುರಿದ ಮಳೆಗೆ ಗುಡಿಸಲಿನಲ್ಲಿ ವಾಸವಿರುವ ಜನರು ಪರಿತಪಿಸಿದರು. ಹಲವು ಮನೆಗಳ ಗೋಡೆ ಕುಸಿದು ನೀರು ನುಗ್ಗಿದ ಪರಿಣಾಮ ರಾತ್ರಿಪೂರ ಆತಂಕದಲ್ಲಿ ಕಳೆಯುವಂತೆ ಆಯಿತು.

‘ರಾತ್ರಿ ಸುರಿದ ಮಳೆಯಿಂದ ಗೋಡೆ ಕುಸಿಯಿತು. ಮನೆ ಮಂದಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದರು. ಬಳೇಪೇಟೆಯ ಹಳ್ಳದ ಬೀದಿಯಲ್ಲಿರುವ ಚರಂಡಿಯಲ್ಲೂ ಹೂಳು ತುಂಬಿದೆ. ಮಳೆ ನೀರು ಕೊಳಚೆಯನ್ನು ಹೊತ್ತು ಮನೆಗೆ ನುಗ್ಗಿದೆ. ನೀರಿನ ಹರಿವು ಹೆಚ್ಚಿಸುವ ಹಾಗೂ ಚರಂಡಿಗಳನ್ನು ಎತ್ತರಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ನಿವಾಸಿಗಳಾದ ರಂಗಸ್ವಾಮಿ ಮತ್ತು ಮಹದೇವನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಬಳೇಪೇಟೆಯ ಉಪ್ಪಾರ ಬಡಾವಣೆಯ ಅಲಮೇಲಮ್ಮ ಎಂಬುವವರ ಮನೆಯ ಗೋಡೆಗಳು ಕುಸಿದಿವೆ. ಕೆಲವು ಮನೆಗಳಿಗೂ ಮಳೆ ನೀರು ನುಗ್ಗಿ ಆತಂಕ ತಂದೊಡ್ಡಿತ್ತು. ಜಲಾವೃತಗೊಂಡ ನಂತರ ನಿವಾಸಿಗಳು ರಾತ್ರಿ ಪೂರ ಜಾಗರಣೆ ನಡೆಸಬೇಕಾಯಿತು. 10 ಮತ್ತು 11ನೇ ವಾರ್ಡ್‌ನ ಚರಂಡಿ ಕಟ್ಟಿಕೊಂಡು ಮೋರಿಗಳಲ್ಲಿ ನೀರು ಸರಾಗವಾಗಿ ಹರಿಯದೇ ಮನೆಗಳ ಸುತ್ತಲೂ ನಿಂತ ಪರಿಣಾಮ ಗೋಡೆ ಕುಸಿದವು ಎನ್ನುತ್ತಾರೆ ಸಿದ್ದಮ್ಮ ಮತ್ತು ಮಹದೇವಸ್ವಾಮಿ.

ADVERTISEMENT

ಪ.ಪಂ. ಅಧಿಕಾರಿಗಳಾದ ಪ್ರಕಾಶ್, ಮಲ್ಲು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ, ಮಾಂಬಳ್ಳಿ, ಕೆಸ್ತೂರು, ಅಗರ ಸೇರಿದಂತೆ ಅನೇಕ ಕಡೆ ಧಾರಾಕಾರ ಮಳೆ ಸುರಿದಿದೆ. ಗೌಡಹಳ್ಳಿ ಗ್ರಾಮದ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರು ತುಂಬಿದ್ದು ಸಾರ್ವಜನಿಕರು ಬವಣೆ ಪಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.