ADVERTISEMENT

ಮರದಡಿ ಪಾಠ ಹೇಳುವ ‘ಆದರ್ಶ’ ಶಾಲೆ!

ಇನ್ನೂ ಪೂರ್ಣಗೊಳ್ಳದ ಹೊಸ ಕಟ್ಟಡದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 10:27 IST
Last Updated 6 ಜೂನ್ 2018, 10:27 IST
ಬಿಸಿಲಿನಲ್ಲಿ ಕುಳಿತಿರುವ ಮಕ್ಕಳು
ಬಿಸಿಲಿನಲ್ಲಿ ಕುಳಿತಿರುವ ಮಕ್ಕಳು   

ಕೊಳ್ಳೇಗಾಲ: ಪಟ್ಟಣದ ಆದರ್ಶ ಶಾಲೆಯ ಮಕ್ಕಳು ಕೊಠಡಿಗಳಿಲ್ಲದೇ ಮರದ ಕೆಳಗೆ ಕುಳಿತು ಪಾಠ ಕೇಳುತ್ತಿದ್ದಾರೆ. ಶಾಲೆಯಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರಿಯಾದ ಕೊಠಡಿ ಸೌಲಭ್ಯ ಇಲ್ಲದೇ ಬಿಸಿಲು, ಮಳೆ ಲೆಕ್ಕಿಸದೆ ಬಯಲಿನಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಅವರಿಗೆ ಬಂದೊದಗಿದೆ.

ಸದ್ಯ ಎಂ.ಜಿ.ಎಸ್.ವಿ ಕಾಲೇಜಿನ ಹಿಂಭಾಗದ ಹಳೇ ಕಟ್ಟಡದಲ್ಲಿ ಆದರ್ಶ ಶಾಲೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಈ ಶಾಲೆಯಲ್ಲಿ ಶೌಚಾಲಯವಿಲ್ಲ. ಪ್ರಯೋಗಾಲಯ, ಕಂಪ್ಯೂಟರ್ ಹಾಗೂ ಗ್ರಂಥಾಲಯಗಳಿಗೆ ಪ್ರತ್ಯೇಕ ಕೊಠಡಿಗಳಿಲ್ಲ. ಸಾಲದ್ದಕ್ಕೆ ಇರುವ ಕೊಠಡಿಗಳ ಬೀಗ ಒಡೆದು ಕಳ್ಳತನ ನಡೆಸಲು ಯತ್ನಿಸಿರುವ ಘಟನೆಗಳೂ ನಡೆದಿವೆ. ಹೀಗಿದ್ದರೂ ಇತ್ತ ಗಮನ ಹರಿಸುವ ಕಾರ್ಯಕ್ಕೆ ಯಾರೂ ಮುಂದಾಗಿಲ್ಲ.

ಪೂರ್ಣಗೊಳ್ಳದ ಕಾಮಗಾರಿ: ಪಟ್ಟಣ ವ್ಯಾಪ್ತಿಯ ಮುಡಿಗುಂಡದಿಂದ ಶಂಕನಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆದರ್ಶ ಶಾಲೆಗಾಗಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಅದರ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ವರ್ಷವೂ ಅದು ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. 3 ವರ್ಷಗಳ ಹಿಂದೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು.

ADVERTISEMENT

ಆದರ್ಶ ಶಾಲೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಅದರಂತೆ ಗುರುತಿಸಲಾಗಿದ್ದ ಒಟ್ಟು 74 ತಾಲ್ಲೂಕು ಕೇಂದ್ರಗಳಲ್ಲಿ ಕಟ್ಟಡಗಳು ನಿರ್ಮಾಣವಾಗಿ ಕಳೆದ ವರ್ಷದಿಂದಲೇ ನೂತನ ಶಾಲಾ ಕಟ್ಟಡಗಳಲ್ಲಿ ತರಗತಿಗಳು ಪ್ರಾರಂಭವಾಗಿವೆ. ಆದರೆ, ಕೊಳ್ಳೇಗಾಲದಲ್ಲಿ ಮಾತ್ರ ಇದುವರೆಗೂ ನೂತನ ಶಾಲಾ ಕಟ್ಟಡ ಪ್ರಾರಂಭವಾಗಿಲ್ಲ.

ಈ ಶೈಕ್ಷಣಿಕ ವರ್ಷದಲ್ಲಿ ಆದರ್ಶ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಭರವಸೆ ನೀಡಲಾಗಿತ್ತು. ಇದೀಗ ತರಗತಿಗಳು ಪ್ರಾರಂಭವಾಗಿವೆ. ಆದರೆ, ಇನ್ನೂ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನಾದರೂ ಜನನಾಯಕರು ಸಬೂಬುಗಳನ್ನು ಹೇಳದೆ ಕೆಲಸದ ಕಡೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸದ್ಯಕ್ಕೆ ಶಾಲೆ ನಡೆಸಲು ಬೇರೆಲ್ಲೂ ಜಾಗ ಇಲ್ಲ. ಹೊಸ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿದ ತಕ್ಷಣ ಶಾಲೆಯನ್ನು ಸ್ಥಳಾಂತರಿಸಲಾಗುವುದು
-ಶಿವಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ

–ಅವಿನ್‌ ಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.