ADVERTISEMENT

ಮಳೆಗಾಲದ ಆರಂಭದಲ್ಲೇ ಕೆರೆಗಳು ಭರ್ತಿ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಸತತ ಮಳೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 6:06 IST
Last Updated 16 ಜೂನ್ 2018, 6:06 IST

ಗುಂಡ್ಲುಪೇಟೆ: ತಾಲ್ಲೂಕಿನ ಕಾಡಂಚಿನ ಭಾಗ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ವಾರದಿಂದ ಸತತ ಮತ್ತು ವಾಡಿಕೆಗಿಂತ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕಾಡಿನೊಳಗಿರುವ ಅನೇಕ ಕೆರೆಗಳು ಭರ್ತಿಯಾಗಿವೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವು ತಮಿಳುನಾಡಿನ ಮದುಮಲೆ ಮತ್ತು ಕೇರಳದ ವಯನಾಡು ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಿದೆ. ಹೆಚ್ಚು ಹುಲಿಗಳು ಇರುವ ಪ್ರದೇಶ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಈ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗಾಗಿ ಸುಮಾರು 350 ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಮಳೆಗಾಲದಲ್ಲಿ ತುಂಬುವ ಈ ಜಲಮೂಲಗಳು ಬೇಸಿಗೆಯಲ್ಲಿ ಪ್ರಾಣಿಗಳ ನೀರಿನದಾಹವನ್ನು ತೀರಿಸುತ್ತವೆ. ಕಳೆದ ವರ್ಷ ಉತ್ತಮ ಮಳೆಯಾಗದ ಕಾರಣ ಕಾಡಿನೊಳಗಿರುವ ಅನೇಕ ಕೆರೆಗಳಲ್ಲಿ ನೀರು ಬತ್ತಿ ಹೋಗಿದ್ದರಿಂದ, ಪ್ರಾಣಿಗಳೆಲ್ಲ ಸದಾ ಕಾಲ ನೀರು ಇರುವ ಮದುಮಲೆ ಮತ್ತು ವಯನಾಡು ವನ್ಯಜೀವಿ ಅಭಯಾರಣ್ಯ ಪ್ರದೇಶಗಳ ಕಡೆಗೆ ವಲಸೆ ಹೋಗಿದ್ದವು ಎಂಬುದನ್ನು ಅಧಿಕಾರಿಗಳೇ ತಿಳಿಸಿದ್ದರು.

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿರುವ ಕಾರಣ ಈಗಾಗಲೇ ಜಲಮೂಲಗಳಿಗೆ ನೀರು ಬಂದಿದೆ. ತಾಲ್ಲೂಕಿನಲ್ಲಿ ಪ್ರತಿವರ್ಷ ಈ ಅವಧಿಯಲ್ಲಿ 242 ಮಿ.ಮೀ ಮಳೆಯಾಗುತ್ತಿತ್ತು. ಆದರೆ, ಈ ಸಲ 385 ಮಿ.ಮೀ ಮಳೆಯಾಗಿರುವುದರಿಂದ ಕುಂದಕೆರೆ, ಮದ್ದೂರು, ಮೂಳೆಹೊಳೆ, ಬಂಡೀಪುರ, ಗೋಪಾಲಸ್ವಾಮಿಬೆಟ್ಟ, ಓಂಕಾರ, ಯಡಿಯಾಲ, ನುಗು, ಕಲ್ಕರೆ ವಲಯಗಳಲ್ಲಿರುವ ಅನೇಕ ಕೆರೆಗಳಿಗೆ ನೀರು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಅರಣ್ಯದೊಳಗೆ ಕೆಲವು ಕೆರೆಗಳಿಗೆ ಪಂಪ್‌ ಮೂ‌ಲಕ ನೀರು ತುಂಬುತ್ತಿದ್ದೇವೆ. ಹಲವು ಜಲಮೂಲಗಳು ಮಳೆಯಿಂದ ತುಂಬುತ್ತಿವೆ. ಹಾಗಾಗಿ, ಎಲ್ಲಾ ವಲಯದ ಕೆರೆಗಳು ಭರ್ತಿಯಾಗಿ ಮುಂದಿನ ಬೇಸಿಗೆಗೆ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಂದರೆ ಆಗುವುದಿಲ್ಲ ಎಂದು ಓಂಕಾರ ವಲಯದ ಅರಣ್ಯಾಧಿಕಾರಿ ನವೀನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ವರ್ಷ ನೀರಿನ ಅಭಾವದಿಂದ ಹತ್ತಕ್ಕೂ ಹೆಚ್ಚಿನ ಪ್ರಾಣಿಗಳು ಮೃತಪಟ್ಟಿದ್ದು ವರದಿಯಾಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಕೆಲ ಕೆರೆಗಳಿಗೆ ಮೋಟರ್‌ ಪಂಪ್‌, ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸುವ ಕೆಲಸ ಮಾಡಿದ್ದರು. ಆದರೆ, ಈ ವರ್ಷ ಓಂಕಾರ, ಯಡಿಯಾಲ, ನುಗು, ಬಂಡೀಪುರ ಮತ್ತು ಕುಂದುಕೆರೆ ವಲಯಗಳಲ್ಲಿ ಎಲ್ಲಾ ಜಲಮೂಲಗಳು ತುಂಬಿವೆ. ಯಡಿಯಾಲ ವಲಯವೊಂದರಲ್ಲೇ 27 ಕೆರೆಗಳಿದ್ದು, ಎಲ್ಲವೂ ಭರ್ತಿಯಾಗಿವೆ ಎಂದು ಯಡಿಯಾಲ ಅರಣ್ಯಾಧಿಕಾರಿ ಸಂದೀಪ್‌ ಹೇಳಿದರು.

ಈಗಾಗಲೇ ತುಂಬಿರುವ ಕೆರೆಗಳು

‌ಬಂಡೀಪುರ ವಲಯದ ನೀಲಕಂಠರಾವ್, ಸೊಳ್ಳಿ ಕಟ್ಟೆ, ಕುಂದುಕೆರೆ ವಲಯದ ಮಾಲಗಟ್ಟೆ, ಕಡಬೂರು ಕಟ್ಟೆ, ದೇವರಮಾಡು, ಮೊಳೆಯೂರು ವಲಯದ ಹುರುಳಿಪುರ ಕೆರೆ, ಎನ್.ಬೇಗೂರು ವಲಯದ ಮೊಡ್ಡ ಮುತ್ತಿಗೆ, ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿಕೆರೆ, ಯಡಿಯಾಲ ವಲಯದ ನಲಗೂರು ಕಟ್ಟೆ, ಅಂಕುಪುರ ಕಟ್ಟೆ, ಚೆನ್ನಪ್ಪನಕಟ್ಟೆ, ಶಂಭುಕಟ್ಟೆ, ಕೆಂಪೇಗೌಡನಕಟ್ಟೆ, ಮರಿಗೌಡ ಕಟ್ಟೆ, ಹೊಸಕೆರೆ, ಸೌತಿಕಟ್ಟೆ, ತಾವರಗಟ್ಟೆ ಕೆರೆಗಳು ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿವೆ.

ಈ ಭಾರಿ ಉತ್ತಮ ಮಳೆ ಬೀಳುತ್ತಿರುವುದರಿಂದ ಕೆರೆಗಳಿಗೆ ನೀರು ಬಂದಿದೆ. ಮಳೆಗಾಲ ಮುಗಿಯುವುದರಲ್ಲಿ ಎಲ್ಲ ಕೆರೆಗಳು ಭರ್ತಿಯಾಗಲಿವೆ. ಬೇಸಿಗೆಗೆ ತೊಂದರೆ ಆಗುವುದಿಲ್ಲ
- ಅಂಬಾಡಿ ಮಾಧವ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ 

ಎಂ.ಮಲ್ಲೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.