ADVERTISEMENT

ಮಳ್ಳೂರು ಅಭಿವೃದ್ಧಿಗೆ ಐದು ಕೋಟಿ: ಶಾಸಕ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 8:00 IST
Last Updated 6 ಫೆಬ್ರುವರಿ 2012, 8:00 IST

ಕೊಳ್ಳೇಗಾಲ: `ಮುಳ್ಳೂರು ಗ್ರಾಮವನ್ನು 5 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ~ ಎಂದು ಶಾಸಕ ಜಿ.ಎನ್. ನಂಜುಂಡಸ್ವಾಮಿ ತಿಳಿಸಿದರು.

ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಆರ್‌ಐಡಿಎಫ್ ಯೋಜನೆಯಡಿ 24.70 ಲಕ್ಷ ಅಂದಾಜುವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರೌಢಶಾಲೆಯ 5 ನೂತನ ಕೊಠಡಿಗಳ ಉದ್ಘಾಟನೆ ಸಂಬಂಧ ಶಾಲೆಯ ಆವರಣದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.

ಸುವರ್ಣ ಗ್ರಾಮ ಯೋಜನೆಯಡಿ ಈಗಾಗಲೇ 70 ಲಕ್ಷ ಹಣ ಸೇರಿದಂತೆ ಸೇತುವೆಗಳ ನಿರ್ಮಾಣ, ರಸ್ತೆ ಅಭಿವೃದ್ಧಿ, ಚರಂಡಿಗಳ ನಿರ್ಮಾಣ ಕಾರ್ಯಕ್ರಮಗಳನ್ನು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಚರಂಡಿ ಮತ್ತು ರಸ್ತೆ ಕಾಮಗಾರಿಗಳು ಮತ್ತು ಜನರಿಗೆ ಮನೆಗಳನ್ನು ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಉಪ್ಪಾರ ಸಮುದಾಯ ಭವನ, ನಾಯಕರ ಸಮುದಾಯ ಭವನ ಹಾಗೂ ಬಸವ ಭವನ ನಿರ್ಮಾಣ ಕಾಮಗಾರಿಗೆ ತಮ್ಮ ನಿಧಿಯಿಂದ ಹಣ ನೀಡುವುದಾಗಿ ಅವರು ಭರವಸೆ ನೀಡಿದರು.

ಮುಖಂಡ ಪ್ರಭುಸ್ವಾಮಿ ಮಾತನಾಡಿದರು. ಪ್ರೌಢಶಾಲೆ ಕೊಠಡಿ ನಿರ್ಮಾಣಕ್ಕೆ ಅಗತ್ಯ ಭೂಮಿ ಖರೀದಿಗೆ ಧನಸಹಾಯ ಮಾಡಿದ ದಾನಿಗಳು ಹಾಗೂ ನಿವೃತ್ತ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಜಿ.ಪಂ. ಸದಸ್ಯೆ ಯಶೋಧಪ್ರಭುಸ್ವಾಮಿ, ತಾ.ಪಂ. ಸದಸ್ಯೆ ಉಮಾ, ಗ್ರಾ.ಪಂ. ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷ ಪ್ರೇಮ್‌ಕುಮಾರ್, ಶಿವಸ್ವಾಮಿ, ಕಾಮಯ್ಯ, ಜಿ.ಪಂ. ಮಾಜಿ ಸದಸ್ಯ ಎಸ್.ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ, ನಿರ್ಮಿತಿ ಕೇಂದ್ರ ವ್ಯವಸ್ಥಾಪಕ ರಾಜಪ್ಪ, ಜೆ.ಇ. ರವಿಕುಮಾರ್, ರಂಗನಾಥ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಲಿಂಗರಾಜು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.