ADVERTISEMENT

`ಮೂಲ ನಿವಾಸಿಗಳ ಅಭಿವೃದ್ಧಿಗೆ ಆದ್ಯತೆ'

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 8:34 IST
Last Updated 2 ಸೆಪ್ಟೆಂಬರ್ 2013, 8:34 IST

ಕೊಳ್ಳೇಗಾಲ: `ಮೂಲ ನಿವಾಸಿಗಳು ಸಹ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ವಿಶೇಷ ಅನುದಾನ ಪ್ರಕಟಿಸಿದ್ದಾರೆ. ಹಿಂದುಳಿದವರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು' ಎಂದು ಶಾಸಕ ಎಸ್. ಜಯಣ್ಣ ಕಿವಿಮಾತು ಹೇಳಿದರು.

ಪಟ್ಟಣದ ಹೊಸಕುರುಬರ ಬೀದಿಯಲ್ಲಿರುವ ಕನಕ ಸಮುದಾಯ ಭವನದಲ್ಲಿ ತಾಲ್ಲೂಕು ಕುರುಬರ ಸಂಘ ಮತ್ತು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಅಧಿಕಾರ ಹಿಡಿಯುತ್ತಿದ್ದಂತೆಯೇ ಉತ್ತಮ ಮಳೆಯಾಗುತ್ತಿದೆ. ಕೆರೆಕಟ್ಟೆಗಳು ತುಂಬಿ ಸಮೃದ್ಧಿ ಕಾಣುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

ಶಾಸಕ ಆರ್. ನರೇಂದ್ರ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಲು ಮುಂದೆ ಬರಬೇಕು. ಪೋಷಕರು ಮಕ್ಕಳನ್ನು ಕೃಷಿ ಹಾಗೂ ಇನ್ನಿತರೆ ಕೆಲಸಗಳಿಗೆ ದೂಡದೆ ಗುಣಮಟ್ಟದ ಶಿಕ್ಷಣ ನೀಡಿ ಅವರು ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪದಕ ವಿಜೇತ ಕಾನ್‌ಸ್ಟೆಬಲ್ ಎಂ. ನಾಗರಾಜು ಅವರನ್ನು ಗೌರವಿಸಲಾಯಿತು.
ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ ತಲಾ 20 ವಿದ್ಯಾರ್ಥಿಗಳಿಗೆ 1 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕ ನೀಡಿ ಗೌರವಿಸಲಾಯಿತು.

ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಲ್. ರಾಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕುರುಬರ ಸಂಘದ ಹಿರಿಯ ಉಪಾಧ್ಯಕ್ಷ ಎನ್. ನಂಜೇಗೌಡ, ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ಚಿಕ್ಕಬಸವಯ್ಯ, ಗೌರವಾಧ್ಯಕ್ಷ ಎನ್. ವೆಂಕಟೇಗೌಡ, ಮುಖಂಡ ಚಿಕ್ಕಲಿಂಗಯ್ಯ, ನಜೀರ್ ಅಹಮದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.