ADVERTISEMENT

ಮೈದುಂಬಿದ ಜಲಾಶಯ, ಕಿರುಜಲಪಾತಗಳ ದರ್ಶನ

ನಾ.ಮಂಜುನಾಥ ಸ್ವಾಮಿ
Published 15 ಅಕ್ಟೋಬರ್ 2017, 6:26 IST
Last Updated 15 ಅಕ್ಟೋಬರ್ 2017, 6:26 IST
ಕೃಷ್ಣಯ್ಯನಕಟ್ಟೆ ಜಲಾಶಯ ಕೋಡಿ ಬೀಳುವ ಹಂತ ತಲುಪಿದೆ
ಕೃಷ್ಣಯ್ಯನಕಟ್ಟೆ ಜಲಾಶಯ ಕೋಡಿ ಬೀಳುವ ಹಂತ ತಲುಪಿದೆ   

ಯಳಂದೂರು: ಎಲ್ಲೆಲ್ಲೂ ಜೀವಧಾಯಿ ಸಲಿಲ ಧಾರೆಯ ನರ್ತನ, ಕಾನನದ ತುಂಬ ಜೋಗುಳದ ಹಾಡಾಗಿ ಕೇಳಿಬರುತ್ತಿದೆ. ಕಾಲಿಟ್ಟಲ್ಲೆಲ್ಲ ಹಸಿರು, ಇಬ್ಬನಿಯ ಸ್ವಾಗತ, ಪುಟ್ಟ ನೀರಿನ ಹೊರತೆಗಳ ದರ್ಶನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಕಾಡು–ಮೆಡುಗಳಲ್ಲಿ, ಬಂಡೆ–ಬದುಗಳಲ್ಲಿ ನೀರಿನ ಹರವು ಹರಡಿ ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮ ಅರಣ್ಯದಲ್ಲಿ ಜೀವಕಳೆ ತುಂಬಿದೆ. ಕೆ.ಗುಡಿಯಿಂದ ಯಳಂದೂರು ಸೇರುವ ತನಕ ವನಸುಮದ ಘಮಲು, ವನ್ಯಜೀವಿಗಳ ವಿಹಾರ, ವಿಸ್ತಾರ ಹಬ್ಬಿಗಳಲ್ಲಿ ತುಂಬಿದ ಹನಿಹನಿಯೂ ಸರೋವರಗಳ ದಿಕ್ಕು ಗುರುತಿಸುತ್ತಾ ಸಾಗಿವೆ. ಹತ್ತಾರು ವಸಂತಗಳಿಂದ ಮರೆಯಾಗಿದ್ದ ಕಿರು ಜಲಪಾತಗಳು ಕಾಡಿನ ನಡುವೆ ಜಲಕನ್ನಿಕೆಯರಂತೆ ಪ್ರತ್ಯಕ್ಷವಾಗಿ ಪರಿಸರ ಪ್ರಿಯರನ್ನು ಇನ್ನಿಲ್ಲದಂತೆ ಆಕರ್ಷಿಸುತ್ತಿದೆ.

ಈಚೆಗೆ ಸುರಿದ ಭಾರಿ ಮಳೆಗೆ ಜಲಪಾತಗಳು ಸೃಷ್ಟಿಯಾಗಿವೆ. ಬಂಡೆಗಳ ನಡುವೆ ಹರಿಯುವ ನೀರು ಪ್ರವಾಸಿಗರನ್ನು ಸೆಳೆಯುತ್ತಿವೆ. ಸೋಮವಾರ ಸಂಜೆಯಿಂದ ಶುಕ್ರವಾರ ಮುಂಜಾನೆವರೆಗೂ 110 ಮಿ.ಮೀ ಮಳೆಯಾಗಿದೆ. ಅಕ್ಟೋಬರ್‌ನಲ್ಲಿ ಅತಿ ಹೆಚ್ಚು (220 ಮಿ.ಮೀ) ಮಳೆ ಸುರಿದಿದೆ.

ADVERTISEMENT

ಈ ವರ್ಷ 1800 ಮಿ.ಮೀ ಬಿಆರ್‌ಟಿ ವಲಯದಲ್ಲಿಯೇ ಆಗಿದೆ. ಇದು 20 ವರ್ಷಗಳಲ್ಲಿಯೇ ಅತ್ಯಧಿಕ. ‘ಕಾಳ್ಗಿಚ್ಚಿನಿಂದ ಬಸವಳಿದಿದ್ದ ಸಸ್ಯವರ್ಗ ಮತ್ತು ಮಣ್ಣು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ಎಲೆಪ್ಯಾಂಟ್‌ ಗ್ರಾಸ್‌ ವೃಕ್ಷದ ಮೇಲೆ ಅರಳುವ ಫೆಪರೋಮಿಯಾ ಟೆಟ್ರಾಫಿಲ್ಲಾ, ವ್ಯಾಂಡ ಮತ್ತು ಆರ್ಕಿಡ್‌ಗಳ ಸಂತತಿ ನಳನಳಿಸಲು ಸಾಧ್ಯವಾಗಿದೆ’ ಎನ್ನುತ್ತಾರೆ ಸಸ್ಯತಜ್ಞ ರಾಮಚಾರಿ.

ಸೋಮರಸನಕೆರೆ, ಲಿಂಗಣ್ಣನಕಟ್ಟೆ, ದೊಡ್ಡಸಂಪಿಗೆಕೆರೆ, ತೆಂಕೆರೆ ನೀರು ಕಂಡಿರುವುದು ವಿಶೇಷ. 25ಕ್ಕೂ ಹೆಚ್ಚು ಕೊಳ್ಳಗಳು, 30 ಚಿಕ್ಕಪುಟ್ಟ ಕೆರೆಗಳು ಇಲ್ಲಿನ ಜೀವ ಜಲದ ಮೂಲವಾಗಿವೆ. 1816 ಮೀಟರ್‌ ಎತ್ತರದ ಕತ್ತರಿಬೆಟ್ಟ ಹಾಗೂ 1767 ಮೀಟರ್‌ ಎತ್ತರದ ಹೊನಮೇಟಿ ಬೆಟ್ಟದಿಂದ ನೀರು ಹರಿಯುತ್ತದೆ. ಇವು ನೈಋತ್ಯ ಮತ್ತು ದಕ್ಷಿಣಕ್ಕೆ ಹರಿಯುವ ಅನೇಕ ಝರಿಗಳನ್ನು ಸೃಷ್ಟಿಸುತ್ತವೆ. ಮುಂದೆ ಹುಲಿ ಕಾಡಿನ ಕೆರೆಗಳನ್ನು ಕೂಡುತ್ತವೆ.

ಪಶ್ಚಿಮ ಭಾಗದ ಇಳಿಜಾರಿನಿಂದ ಹರಿಯುವ ಜಲಧಾರೆ 1850 ಎಕರೆ ವಿಸ್ತೀರ್ಣದ ಕೃಷ್ಣಯ್ಯನಕಟ್ಟೆ ಜಲಾಶಯ ಸೇರುತ್ತದೆ. ಇದು 1170 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತದೆ. ಬಹುತೇಕ ತುಂಬಿರುವ ಈ ಸರೋವರ ಕೋಡಿ ಬೀಳಲು 3 ಅಡಿಗಳ ನೀರು ಸಾಕು. ಹಾಗಾಗಿ, ವನಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರ ಆಕರ್ಷಣೆಗೆ ಆಣೆಕಟ್ಟೆ ಕಾರಣವಾಗಿದೆ ಎನ್ನುತ್ತಾರೆ ಗುಂಬಳ್ಳಿ ಭಾಗದ ಸಿಆರ್‌ಪಿ ಲಿಂಗರಾಜು.

ಬೋರ್‌ ವೆಲ್‌ನಲ್ಲಿ ಚಿಮ್ಮಿದ ನೀರು: ಕಾಡಂಚಿನ ಗ್ರಾಮ ದೇವರಹಳ್ಳಿ ಬಳಿಯ ಕೈ ಪಂಪ್‌ನ ಬುಡದಲ್ಲಿ ನೀರು ಉಕ್ಕುತ್ತಿದೆ. ಸಮೃದ್ಧ ಮಳೆ ಇಳೆ ತಂಪಾಗಿಸಿದೆ. ಅಂತರ್ಜಲದಲ್ಲಿ ಏರಿಕೆ ಕಂಡ ಕಾರಣ ನಳದ ತಳ ಭಾಗದಿಂದ ನೀರು ಹೊರ ಚಿಮ್ಮುತ್ತಿದೆ. ಇಂತಹ ವಿದ್ಯಮಾನ ವೀಕ್ಷಿಸಿದ ಸುತ್ತಲ ಗ್ರಾಮಗಳ ಜನರು ಸಮೀಪದ ಮಹದೇಶ್ವರ ದೇವಾಲಯಕ್ಕೆ ಹರಕೆ ಒಪ್ಪಿಸಿ ಧನ್ಯರಾಗುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.