ADVERTISEMENT

ಯೋಧನಿಗೆ ಅಂತಿಮ ನಮನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 9:53 IST
Last Updated 25 ಜೂನ್ 2013, 9:53 IST
ಉತ್ತರ ಪ್ರದೇಶದ ಲಖನೌದಲ್ಲಿ ಅಪಘಾತದಲ್ಲಿ ಮೃತಪಟ್ಟ ಸಿಆರ್‌ಪಿಎಫ್ ಯೋಧ ರಾಜಶೇಖರ್ ಪಾರ್ಥೀವ ಶರೀರವನ್ನು ಗುಂಡ್ಲುಪೇಟೆ ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ಸೋಮವಾರ ಮೆರವಣಿಗೆ ಮಾಡಲಾಯಿತು.
ಉತ್ತರ ಪ್ರದೇಶದ ಲಖನೌದಲ್ಲಿ ಅಪಘಾತದಲ್ಲಿ ಮೃತಪಟ್ಟ ಸಿಆರ್‌ಪಿಎಫ್ ಯೋಧ ರಾಜಶೇಖರ್ ಪಾರ್ಥೀವ ಶರೀರವನ್ನು ಗುಂಡ್ಲುಪೇಟೆ ತಾಲ್ಲೂಕಿನ ಗೋಪಾಲಪುರ ಗ್ರಾಮದಲ್ಲಿ ಸೋಮವಾರ ಮೆರವಣಿಗೆ ಮಾಡಲಾಯಿತು.   

ಗುಂಡ್ಲುಪೇಟೆ: ಉತ್ತರ ಪ್ರದೇಶದ ಲಖನೌದಲ್ಲಿ ಶುಕ್ರವಾರ ಅಪಘಾತದಲ್ಲಿ ಮೃತಪಟ್ಟ ತಾಲ್ಲೂಕಿನ ಗೋಪಾಲಪುರದ ಗ್ರಾಮದ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯೋಧ ಜಿ.ಎಸ್. ರಾಜಶೇಖರ್ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಸೋಮವಾರ ನೆರವೇರಿತು.

ಸೋಮವಾರ ಬೆಳಿಗ್ಗೆ ವಿಶೇಷ ವಿಮಾನದ ಮೂಲಕ ಪಾರ್ಥಿವ ಶರೀರವನ್ನು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ಸ್ವಗ್ರಾಮ ಗೋಪಾಲಪುರಕ್ಕೆ ಕಾರಿನ ಮೂಲಕ ತರಲಾಯಿತು.

ಬೆಳಿಗ್ಗೆ 10.30ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಚಾಮರಾಜನಗರ ಜಿಲ್ಲಾ ಪೊಲೀಸ್ ಪಡೆಯಿಂದ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ನಮನ ಸಲ್ಲಿಸಲಾಯಿತು. ಮಧ್ಯಾಹ್ನ 12.30ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಬಂಧುಗಳು, ಸುತ್ತಮುತ್ತಲಿನ ಗ್ರಾಮಗಳ ಜನರು ಪಾಲ್ಗೊಂಡು ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ತಹಶೀಲ್ದಾರ್ ಚಿದಾನಂದ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ಜಿ.ಎಸ್. ಶಾಂತಪ್ಪ-ಪಾರ್ವತಮ್ಮ ದಂಪತಿ ಪುತ್ರ ರಾಜಶೇಖರ ಅವರು ಉತ್ತರ ಪ್ರದೇಶದ ಲಖನೌದಲ್ಲಿ ಕಳೆದ ಶುಕ್ರವಾರ ಕರ್ತವ್ಯಕ್ಕೆಂದು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.