ಚಾಮರಾಜನಗರ: ಮೈಸೂರಿನ ರಂಗಾಯಣದಿಂದ ಜಿಲ್ಲಾ ಕೇಂದ್ರದಲ್ಲಿ ಆ.24ರಿಂದ 26ರವರೆಗೆ ಜಿಲ್ಲಾ ರಂಗೋತ್ಸವ ಹಮ್ಮಿಕೊಳ್ಳಲಾಗಿದ್ದು, 3 ನಾಟಕಗಳ ಪ್ರದರ್ಶನ ನಡೆಯಲಿದೆ.
`ಮೈಸೂರಿನ ನೆರೆಯ ಜಿಲ್ಲೆಗಳಾದ ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ರಾಮನಗರ ಜಿಲ್ಲೆಯಲ್ಲಿ ರಂಗಾಯಣದ ಚಟುವಟಿಕೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರ ಅಂಗವಾಗಿ ಜಿಲ್ಲಾ ರಂಗೋತ್ಸವ ಏರ್ಪಡಿಸಲಾ ಗುತ್ತಿದೆ. ಉಚಿತ ಪ್ರದರ್ಶನದ ಮೂಲಕ ಯುವಜನರನ್ನು ರಂಗ ಕ್ಷೇತ್ರದತ್ತ ಸೆಳೆಯಲಾಗುವುದು. ಮಕ್ಕಳ ರಂಗ ತರಬೇತಿ ಶಿಬಿರ ಕೂಡ ಏರ್ಪಡಿಸ ಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರಿಂದಲೇ ನಾಟಕ ಪ್ರದರ್ಶನ ಹಮ್ಮಿಕೊಳ್ಳಲು ತೀರ್ಮಾ ನಿಸಲಾಗಿದೆ~ ಎಂದು ರಂಗಾಯಣದ ನಿರ್ದೇಶಕ ಡಾ.ಬಿ.ವಿ. ರಾಜಾರಾಂ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ಮುಂದೆ ಬಂದರೆ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡಲಾಗುವುದು. ಜತೆಗೆ, ತಿಂಗಳಿಗೊಮ್ಮೆ ನೆರೆಯ ಜಿಲ್ಲೆಗಳಲ್ಲಿ ರಂಗ ಚಟುವಟಿಕೆ ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದರು.
ಆ. 24ರಂದು ರಂಗೋತ್ಸವ ಆರಂಭವಾಗಲಿದೆ. ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಅಂದು ಸಂಜೆ 6ಗಂಟೆಗೆ ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ ಚಾಲನೆ ನೀಡಲಿದ್ದಾರೆ. ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆವಹಿಸಲಿದ್ದಾರೆ. ಜಿಲ್ಲಾಧಿಕಾರಿ ಕೆ.ಆರ್. ಸುಂದರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಆರ್. ಸೋಮಶೇಖರಪ್ಪ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ರಂಗಭೂಮಿ ಕಲಾವಿದರಾದ
ಆಲೂರು ನಾಗರಾಜು ಹಾಗೂ ಪ್ರೇಮಾ ನಾದೇ ಅವರನ್ನು ಸನ್ಮಾನಿಸಲಾಗುವುದು ಎಂದರು.
ಮೊದಲ ದಿನ ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ರಚಿಸಿರುವ `ಕೃಷ್ಣೇಗೌಡನ ಆನೆ~ ನಾಟಕ ಪ್ರದರ್ಶನ ನಡೆಯಲಿದೆ. ಆರ್. ನಾಗೇಶ್ ಈ ನಾಟಕ ನಿರ್ದೇಶಿಸಿದ್ದಾರೆ. ಆ. 25ರಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ರಚಿಸಿರುವ `ಗೋಕರ್ಣದ ಗೌಡಶಾನಿ~ ನಾಟಕ ಪ್ರದರ್ಶನ ನಡೆಯಲಿದ್ದು, ಹುಲಗಪ್ಪ ಕಟ್ಟಿಮನೆ ನಿರ್ದೇಶಿಸಿದ್ದಾರೆ.
ಆ. 26ರಂದು ಚಂದ್ರಕಾಂತ ಕುಸನೂರ್ ರಚನೆಯ ಮಂಜುನಾಥ್ ಬೆಳಕೆರೆ ನಿರ್ದೇಶನದ `ದಿಂಡಿ~ ನಾಟಕ ಪ್ರದರ್ಶನವಿದೆ. ರಂಗಾಯಣದ ಕಲಾವಿದರು ಈ ನಾಟಕಗಳಲ್ಲಿ ಅಭಿನಯಿಸಲಿದ್ದಾರೆ ಎಂದು ವಿವರಿಸಿದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಜಿಲ್ಲೆಯ ಎಲ್ಲ ರಂಗ ತಂಡಗಳು ರಂಗೋತ್ಸವಕ್ಕೆ ಸಹಕಾರ ನೀಡಿವೆ. ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸುವುದೇ ಈ ರಂಗೋತ್ಸವದ ಮೂಲ ಉದ್ದೇಶ ಎಂದರು.
ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಮಂಜಪ್ಪ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎಸ್. ಮಹೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.