ADVERTISEMENT

ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 6:55 IST
Last Updated 12 ಏಪ್ರಿಲ್ 2011, 6:55 IST

ಕೊಳ್ಳೇಗಾಲ: ರಾಜ್ಯ ಸರ್ಕಾರದ ಹೆಚ್ಚಿನ ಅನುದಾನದ ನಿರೀಕ್ಷಿಸಿ ರೂ. 4,09,82, 000 ಉಳಿತಾಯ ನಿರೀಕ್ಷೆಯೊಂದಿಗೆ ಪುರಸಭೆ ಅಧ್ಯಕ್ಷೆ ಎಸ್.ಮಂಗಳಗೌರಿ ಒಟ್ಟು ರೂ. 24, 97.80 000 ಮೊತ್ತದ ಬಜೆಟ್‌ನ್ನು ಕೇವಲ ಮೂರು ನಿಮಿಷಗಳಲ್ಲಿ ಮಂಡಿಸಿದರು.

ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಸೋಮವಾರ 2011-12ನೇ ಸಾಲಿನ ಬಜೆಟ್ ಮಂಡಿಸಲಾಯಿತು. ಪ್ರಸಕ್ತ ವರ್ಷ ಆರಂಭಿಕ ಆದಾಯ ರೂ. 5,10,33,331 ಕೋಟಿ ಸೇರಿದಂತೆ ಈ ಬಾರಿ ಒಟ್ಟು ರೂ.19,87,48.00 ಆದಾಯ ನಿರೀಕ್ಷಿಸ ಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ 10.30 ಕೋಟಿ ಅನುದಾನವೂ ಸೇರಿದೆ. ಉದ್ದಿಮೆ ಪರವಾನಗಿ ಶುಲ್ಕ, ಆಸ್ತಿ ತೆರಿಗೆ, ನೀರಿನ ಕರ ಸೇರಿದಂತೆ ವಿವಿಧ ಮೂಲಗಳಿಂದ ಉಳಿದ ಆದಾಯ ಸಂಗ್ರಹಿಸಲು ಪ್ರಸ್ತಾಪಿಸಲಾಗಿದೆ.

ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನಗರದ ಸೌಂದರ್ಯಕ್ಕೆ ಆದ್ಯತೆ ನೀಡುವ ಯೋಜನೆಯ  ಸುಳಿವು ಬಜೆಟ್‌ನಲ್ಲಿ ಇಲ್ಲ. ಈಗಾಗಲೇ ಪಟ್ಟಣದಲ್ಲಿ ಸಾಕಷ್ಟು ಸಿಮೆಂಟ್ ರಸ್ತೆಗಳು ನಿರ್ಮಾಣವಾಗಿದ್ದರೂ ಮತ್ತೆ ರಸ್ತೆ ಕಾಮಗಾರಿಗೆ ಅಗ್ರಸ್ಥಾನ ನೀಡಲಾಗಿದೆ. ಕ್ರೀಡಾಕ್ಷೇತ್ರ, ಅಂಗವಿಕಲರು, ಶಿಕ್ಷಣ ಮತ್ತು ಮಹಿಳೆಯರ ಕಲ್ಯಾಣಕ್ಕೆ ಯಾವುದೇ ನಿರ್ದಿಷ್ಟ ಅನುದಾನ ನೀಡಿಲ್ಲ.

ನಗರಸಭೆಯ ಅಭಿವೃದ್ಧಿ ಕಾರ್ಯಕ್ರಮಗಳು ಬಹುತೇಕ ಸರ್ಕಾರದ ಅನುದಾನದ ಮೇಲೆ ನಿಂತಿವೆ. ಹೊಸ ಅಭಿವೃದ್ಧಿ ಕಾಮಗಾರಿಗಳ ಘೋಷಣೆ ಇಲ್ಲದ ಸಾಮಾನ್ಯ ಬಜೆಟ್ ಅಧ್ಯಕ್ಷರು ಮಂಡಿಸಿದಂತಾಗಿದೆ.

ಆದಾಯದ ಮೂಲ: ನಗರಸಭೆ ಆದಾಯ ನಿರೀಕ್ಷೆ ವಿವರ ಇಂತಿದೆ. ಕಟ್ಟಡ ಆಸ್ತಿ ತೆರಿಗೆ ರೂ. 50 ಲಕ್ಷ ಉದ್ದಿಮೆ ಪರವಾನಗಿ ಶುಲ್ಕ ರೂ.4.50 ಲಕ್ಷ, ಬಾಡಿಗೆಯಿಂದ 15 ಲಕ್ಷ, ಕಟ್ಟಡ ಪರವಾನಗಿ ಶುಲ್ಕ 3.50 ಲಕ್ಷ, ನಿವೇಶನ ಅಭಿವೃದ್ಧಿ ಶುಲ್ಕ 5 ಲಕ್ಷ, ಬ್ಯಾಂಕ್ ಠೇವಣಿ ಬಡ್ಡಿಯಿಂದ 15 ಲಕ್ಷ. ಮಾರುಕಟ್ಟೆ ಬಾಡಿಗೆಯಿಂದ 3 ಲಕ್ಷ. ಖಾತಾ ಬದಲಾವಣೆ ಶುಲ್ಕದಿಂದ 1 ಲಕ್ಷ. ಟೆಂಡರ್ ಫಾರಂಗಳ ಮಾರಾಟದಿಂದ 1ಲಕ್ಷ,  ಜನನ- ಮರಣ ಪ್ರಮಾಣ ಪತ್ರಗಳ ಶುಲ್ಕದಿಂದ 0.50ಲಕ್ಷ, ಶೌಚಾಲಯ ಮತ್ತು ಬಸ್‌ನಿಲ್ದಾಣದ ಶುಲ್ಕ ದಿಂದ 5 ಲಕ್ಷ, ನೀರಿನ ದರಗಳ ವಸೂಲಾ ತಿಯಿಂದ 20 ಲಕ್ಷ ರೂ ಆದಾಯ ನಿರೀಕ್ಷೆ ಮಾಡಲಾಗಿದೆ.

ಅಭಿವೃದ್ಧಿ ವೆಚ್ಚ:
ಈ ಬಾರಿಯ ಬಜೆಟ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮೇಲೆ ಮಾಡುವ ಖರ್ಚಿನ  ವಿವರ ಈ ರೀತಿ ಇದೆ.  ರಸ್ತೆಗಳ ನಿರ್ಮಾಣಕ್ಕೆ 395 ಲಕ್ಷ. ಚರಂಡಿ ನಿರ್ಮಾಣಕ್ಕೆ 145.50 ಲಕ್ಷ, ಕಚೇರಿಗೆ ಗಣಕಯಂತ್ರ ಖರೀದಿಗೆ 3.55 ಲಕ್ಷ. ಬೀದಿ ವಿದ್ಯುತ್ ದೀಪಕ್ಕೆ 25 ಲಕ್ಷ. ಪಂಪ್‌ಹೌಸ್ ಯಂತ್ರ ಹಾಗೂ ಇತರೆ ಸಲಕರಣೆಗೆ 30 ಲಕ್ಷ. ರಸ್ತೆ ಮತ್ತು ಚರಂಡಿ ದುರಸ್ತಿಗೆ 5.50 ಲಕ್ಷ ರೂ. ಬೀದಿ ದೀಪಗಳ ನಿರ್ವಹಣೆಗೆ 25 ಲಕ್ಷ. ನೈರ್ಮಲ್ಯ ಕಾಮಗಾರಿ ನಿರ್ವಹಣೆ-35 ಲಕ್ಷ. ನೀರು ನಿರ್ವಹಣೆಗೆ 22.50 ಲಕ್ಷ.
ಒಳಚರಂಡಿಗೆ 4.50 ಲಕ್ಷ, ನೈರ್ಮಲ್ಯ ಕಾಮಗಾರಿ ವಿಭಾಗಕ್ಕೆ 195 ಲಕ್ಷ. ಹೊಸ ಪೈಪ್‌ಲೈನ್ ಅಳವಡಿಕೆಗೆ 33.50 ಲಕ್ಷ. ನೀರು ಸರಬರಾಜು ಸಾಮಗ್ರಿ ಖರೀದಿಗೆ 12 ಲಕ್ಷ. ಮುದ್ರಣ ಮತ್ತು ಲೇಖನ ಸಾಮಗ್ರಿ ಖರೀದಿಗೆ 3.50 ಲಕ್ಷ. ನಗರಸಭೆ ಸದಸ್ಯರ ಗೌರವಧನ ಮತ್ತು ಇತರೆ ವೆಚ್ಚಕ್ಕೆ 5.20 ಲಕ್ಷ. ದೇಣಿಗೆ ನೀಡಲು 1.40ಲಕ್ಷ. ನಗರಸಭಾ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳಿಗೆ 130 ಲಕ್ಷ  ವೆಚ್ಚ ಮಾಡಲು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.