ADVERTISEMENT

ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 8:30 IST
Last Updated 16 ಸೆಪ್ಟೆಂಬರ್ 2011, 8:30 IST

ಚಾಮರಾಜನಗರ: ತಾಲ್ಲೂಕಿನ ಹಿತ್ತಲುಗುಡ್ಡ, ಕುಂಟುಗುಡಿಪೋಡು ಹಾಗೂ ಭೋಗಾಪುರ ಗ್ರಾಮದಲ್ಲಿ ಇತ್ತೀಚೆಗೆ ಸಿಮೆಂಟ್ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.

ಭೋಗಾಪುರ ಗ್ರಾಮದಲ್ಲಿ ಗುದ್ದಲಿಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಗ್ರಾಮದ ಪರಿಶಿಷ್ಟ ಜಾತಿಯ ಬೀದಿಯಲ್ಲಿ 12.43 ಲಕ್ಷ ರೂ ವೆಚ್ಚದಡಿ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.

ಹಿತ್ತಲಗುಡ್ಡ ಗಿರಿಜನ ಕಾಲೊನಿಯಲ್ಲಿ 8.37 ಲಕ್ಷ ರೂ ವೆಚ್ಚದಡಿ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣ, ಕುಂಟಗುಡಿಪೋಡು ಗಿರಿಜನ ಕಾಲೊನಿಯಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಿಸಿದರು.

ಭೋಗಾಪುರ ಗ್ರಾಮವನ್ನು ಗುಡಿಸಲುರಹಿತ ಗ್ರಾಮವನ್ನಾಗಿ ಮಾಡಲಾಗುವುದು. ಗ್ರಾಮಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡಲು ಚಿಂತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದ ತನಕ 1.42 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ. ನಲ್ಲೂರು- ಹಿತ್ತಲಗುಡ್ಡ ಗ್ರಾಮದ ರಸ್ತೆ ಅಭಿವೃದ್ಧಿಗೆ 1.50 ಕೋಟಿ ರೂ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ತಾ.ಪಂ. ಅಧ್ಯಕ್ಷೆ ಪದ್ಮಾ ಚಂದ್ರು ಮಾತನಾಡಿದರು. ಉಪಾಧ್ಯಕ್ಷ ಮಹಾಲಿಂಗಸ್ವಾಮಿ, ಸದಸ್ಯ ಮಹಾಲಿಂಗು, ಭೋಗಾಪುರ ಗ್ರಾ.ಪಂ. ಉಪಾಧ್ಯಕ್ಷ ಗುರುಸ್ವಾಮಿ, ಸದಸ್ಯೆ ಸುನೀತಾ, ಎಂ.ಎಸ್. ಮಾದಯ್ಯ, ನಾಗಯ್ಯ, ಮೂರ್ತಿ, ಕುಮಾರನಾಯಕ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.