ADVERTISEMENT

ರಾಷ್ಟ್ರಕವಿ ಜಿಎಸ್‌ಎಸ್‌ ನಿಧನಕ್ಕೆ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 7:48 IST
Last Updated 24 ಡಿಸೆಂಬರ್ 2013, 7:48 IST

ಚಾಮರಾಜನಗರ: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಸಂಸದ ಆರ್. ಧ್ರುವನಾರಾಯಣ ತೀವ್ರ ಸಂತಾಪ ಸೂಚಿಸಿದ್ದಾರೆ.

ಮೈಸೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅವರು, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದರು. ಶಿಸ್ತು, ಶ್ರದ್ಧೆಗೆ ಮಾದರಿಯಾಗಿದ್ದ ಸಾಹಿತಿಯನ್ನು ಕಳೆದುಕೊಂಡಿರುವುದು ನಾಡಿಗೆ ಹಾಗೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.  

ಶ್ರೇಷ್ಠ ಕವಿ: ‘ಜಿ.ಎಸ್. ಶಿವರುದ್ರಪ್ಪ ಅವರು ಕನ್ನಡದ ಶ್ರೇಷ್ಠ ಕವಿ’ ಎಂದು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಯರಗನಹಳ್ಳಿ ಬಿ. ಗುರುರಾಜು ಹೇಳಿದರು.

ನಗರದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಮತ್ತು ರಂಗವಾಹಿನಿಯಿಂದ ಸೋಮವಾರ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಮಹೇಶ್‌ ಹರವೆ ಮಾತನಾಡಿ, ‘ಶಿವರುದ್ರಪ್ಪ ಅವರು ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕುವೆಂಪು ಅವರ ಮಾರ್ಗದರ್ಶನದಲ್ಲಿ ಸೌಂದರ್ಯ ಸಮೀಕ್ಷೆ, ಪ್ರವಾಸ ಕಥನ ವಿಮರ್ಶೆ ಸೇರಿದಂತೆ ಹಲವು ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದು ಹೇಳಿದರು. ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಮಾತನಾಡಿದರು. ವಿದ್ಯಾಲಯದ ಮುಖ್ಯಶಿಕ್ಷಕ ನಿಂಗೇಗೌಡ ಅಧ್ಯಕ್ಷತೆವಹಿಸಿದ್ದರು. ಶಿಕ್ಷಕಿ ವಿಶಾಲಾಕ್ಷಿ, ಅರ್ಜುನ್, ಸಂಪತ್‌ಕುಮಾರ್, ಸುಮಿತ್ರಾ, ಆರತಿ, ಶಾಲಿನಿ, ಲೀಲಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಬಿಜೆಪಿ ಜಿಲ್ಲಾ ಘಟಕ: ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಜಿಲ್ಲಾ ಬಿಜೆಪಿ ಘಟಕ ಸಂತಾಪ ಸೂಚಿಸಿದೆ. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಜಿ.ಎನ್‌. ನಂಜುಂಡಸ್ವಾಮಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಎಸ್‌. ನಾಗರಾಜಪ್ಪ, ಉಪಾಧ್ಯಕ್ಷ ಎಸ್‌. ಬಾಲಸುಬ್ರಮಣ್ಯ, ಶೈಲಕುಮಾರ್, ರ. ನಾರಾಯಣಗೌಡ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.