ADVERTISEMENT

ರಾಷ್ಟ್ರದ ಪ್ರಗತಿಗೆ ಶಿಕ್ಷಣ ಪೂರಕ

​ಪ್ರಜಾವಾಣಿ ವಾರ್ತೆ
Published 10 ಮೇ 2012, 8:45 IST
Last Updated 10 ಮೇ 2012, 8:45 IST

ಚಾಮರಾಜನಗರ:`ಗ್ರಾಮೀಣ ಪ್ರದೇಶದ ಶೈಕ್ಷಣಿಕ ವ್ಯವಸ್ಥೆ ಸಬಲೀಕರಣಗೊಂಡರೆ ರಾಷ್ಟ್ರ ಕೂಡ ಸದೃಢವಾಗಲಿದೆ~ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬೆಳ್ಳಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ರೋಟರಿ ಭವನದಲ್ಲಿ ಸೋಮವಾರ ರಾಜ್ಯ ಸರ್ಕಾರಿ ಎಸ್‌ಸಿ-ಎಸ್‌ಟಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಬುದ್ಧ, ಬಸವ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಧುನಿಕತೆಯ ಪ್ರಭಾವದಿಂದ ತಂತ್ರಜ್ಞಾನದ ಸ್ಫೋಟವಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣದ ವ್ಯವಸ್ಥೆಯಲ್ಲೂ ಹೊಸ ಬದಲಾವಣೆ ತರಬೇಕಿದೆ. ಆಂಗ್ಲ ಭಾಷೆ, ವಿಜ್ಞಾನ, ಗಣಿತ ವಿಷಯ ಕುರಿತು ಕಾರ್ಯಾಗಾರ ನಡೆಸುವ ವಿಶೇಷ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಬೇಕಿದೆ ಎಂದರು.

ಶಿಕ್ಷಕರು ದಾರ್ಶನಿಕರ ತತ್ವ, ಆದರ್ಶವನ್ನು ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೃತ್ತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಆಧುನಿಕತೆಯ ವೇಗಕ್ಕೆ ತಕ್ಕಂತೆ ಮುನ್ನಡೆಯಬೇಕು.

ಒಬ್ಬ ನೌಕರ ತನ್ನ ಕ್ಷೇತ್ರದಲ್ಲಿ ಸಂಪೂರ್ಣ ತಿಳಿವಳಿಕೆ ಪಡೆದುಕೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಸರ್ಕಾರಿ ನೌಕರರು ತಮ್ಮ ಕ್ಷೇತ್ರದ ಬಗ್ಗೆ ಅಧ್ಯಯನ ಮಾಡಬೇಕು. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬದ್ಧರಾಗಬೇಕು ಎಂದು ಸಲಹೆ ನೀಡಿದರು.

ಜೆಎಸ್‌ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ ಮಾತನಾಡಿ, ಶಿಕ್ಷಕರು ಸಮಯಪಾಲನೆಯನ್ನು ಮೈಗೂಡಿಸಿಕೊಂಡರೆ ದಾರ್ಶನಿಕರ ತತ್ವಪಾಲಿಸಿದಂತಾಗುತ್ತದೆ.

ದಾರ್ಶನಿಕರ ಜೀವನ ಚರಿತ್ರೆ ಹೇಳುವ ಬದಲು ಅವರು ನಡೆದು ಬಂದ ದಾರಿಯಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯಬೇಕಿದೆ. ಜತೆಗೆ, ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಶಿಕ್ಷಣದ ಜ್ಞಾನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಡಯಟ್ ಪ್ರಾಂಶುಪಾಲ ಎನ್. ರುದ್ರಯ್ಯ ಮಾತನಾಡಿ, ಸರ್ವರೂ ಸಮಾನರು ಎಂದು ಎಲ್ಲ ದಾರ್ಶನಿಕರು ಸಂದೇಶ ನೀಡಿದ್ದಾರೆ. ಶಿಕ್ಷಕರು ಮಕ್ಕಳಿಗೆ ಶಿಸ್ತು, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಅಂದಾನಿ, ಡಯಟ್ ಉಪನ್ಯಾಸಕ ಎಂ. ಚಂದ್ರಕಾಂತ್, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎನ್. ಮಂಜುನಾಥ್, ಕಾರ್ಯದರ್ಶಿ ಮಹದೇವಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ ಬಿಸಲ್ವಾಡಿ, ಭರತ್‌ಭೂಷಣ್, ಎನ್. ನೇತ್ರಾವತಿ ಇತರರು ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.