ADVERTISEMENT

ರೈತರು ಧೃತಿಗೆಡಬಾರದು: ಶಾಸಕ ನರೇಂದ್ರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 9:55 IST
Last Updated 7 ಜುಲೈ 2012, 9:55 IST

ಕೊಳ್ಳೇಗಾಲ:~ ರೈತರು ಬರದಿಂದ ಧೃತಿಗೆಡದೆ ಧೈರ್ಯದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಬೇಕು~ ಎಂದು ಶಾಸಕ ಆರ್. ನರೇಂದ್ರ ಕರೆ ನೀಡಿದರು.

ತಾಲ್ಲೂಕಿನ ಬಂಡಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಕೃಷಿ ಇಲಾಖೆ ಸಸ್ಯ ಸಂರಕ್ಷಣಾ ಯೋಜನೆಯಡಿ ಬುಧವಾರ ಏರ್ಪಡಿಸಿದ್ದ ಬೀಜೋಪಚಾರ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಳೆಬಾರದ ಕಾರಣ ರೈತರು ಸಂಕಷ್ಟದಲ್ಲಿ ಸಿಲುಕಿ, ಮಳೆಗಾಗಿ ಮೋಡದತ್ತ ಮುಖಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ನಿರೀಕ್ಷಿಸಿ, ರೈತರು ತಾಳ್ಮೆ ಕಳೆದುಕೊಳ್ಳದೆ ಇಲಾಖೆಯ ಸೌಲಭ್ಯಗಳ ಬಳಕೆಗೆ ಮುಂದಾಗಬೇಕು ಎಂದರು.

ಕೃಷಿಯಲ್ಲಿ ಇತ್ತೀಚಿನ ಹೊಸ ಪದ್ಧತಿಗಳನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬೆಳೆಬೆಳೆಯಲು ಮುಂದಾಗಬೇಕು. ಹಳೇ ಪದ್ಧತಿಗಳಿಗೆ ಜೋತುಬೀಳದೆ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿವನ್ನು ಹೊಂದಬೇಕು ಎಂದು ನುಡಿದರು.

ಸಹಾಯಕ ಕೃಷಿ ನಿರ್ದೇಶಕ ಕೆ. ರಾಮು ಮಾತನಾಡಿ ಸಸ್ಯ ಸಂರಕ್ಷಣೆ ಮಹತ್ವ, ಇಲಾಖೆಯಲ್ಲಿ ದೊರೆಯುವ ರಿಯಾಯಿತಿ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ವಿ.ಮನೋಹರ್ ಮಾತನಾಡಿ ರೋಗ ನಿರೋಧಕ ಸಸ್ಯ ಸಂರಕ್ಷಣೆಯೊಡನೆ ರೈತರ ಬಿತ್ತನೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.

ಕೃಷಿ ವಿಜ್ಞಾನಿ ಅನ್ವರ್‌ವುಲ್ಲಾ ಪ್ರಾಥ್ಯಕ್ಷಿಕೆ ಮೂಲಕ ವಿವಿಧ ಬೆಳೆಗಳ ಬಿತ್ತನೆ ಬೀಜಗಳಿಗೆ ಸೂಕ್ತ ಜೀವಾಣು ಗಳನ್ನು ಉಪಯೋಗಿಸಿ ಸಸ್ಯ ಸಂರಕ್ಷಣೆ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು, ನಾಗಯ್ಯ, ವೆಂಕಟಾಚಲ ಟಿ.ಎ.ಪಿ.ಸಿ.ಎಂ.ಎಸ್ ಸದಸ್ಯ ಮಲ್ಲಪ್ಪ, ಲಿಂಗರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.