ADVERTISEMENT

ಲೇಖನಗಳಿಂದ ಯುವಕರನ್ನು ಸರಿದಾರಿಗೆ ತನ್ನಿ: ಸಾ.ಶಿ.ಮರಳಯ್ಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2011, 10:00 IST
Last Updated 20 ಏಪ್ರಿಲ್ 2011, 10:00 IST

ಮೈಸೂರು: ‘ಸಾಹಿತಿಗಳು ಉತ್ತಮ ಲೇಖನ ಗಳಿಂದ ಯುವಕರನ್ನು ಸರಿದಾರಿಗೆ ತರುವ ಅಗತ್ಯವಿದೆ’ ಎಂದು ಸಾಹಿತಿ ಡಾ.ಸಾ.ಶಿ. ಮರಳಯ್ಯ ಹೇಳಿದರು.
ನಂಜನಗೂಡು ತಾಲ್ಲೂಕಿನ ಸುತ್ತೂರಿನ ಅಖಿಲ ಭಾರತ ವೀರಶೈವ ಮಹಾಸಭಾ 22ನೇ ಮಹಾ ಅಧಿವೇಶನದಲ್ಲಿ ಮಹದೇಶ್ವರ ಮಂಟಪದಲ್ಲಿ ಮಂಗಳವಾರ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಾವ್ಯ ಜೀವನಾನುಭವದ ಪ್ರತೀಕ. ಜೀವನಾನುಭವ ಇಲ್ಲದೆ ಕಾವ್ಯವಿಲ್ಲ. ಕಾವ್ಯದ ರಚನೆಗೆ ಬದುಕು ಬಂಡವಾಳ ಆಗಬೇಕು. ಕಾವ್ಯವು ಎಂದಿಗೂ ನಿರಂತರವಾಗಿ ಹರಿಯುವ ನೀರು’ ಎಂದು ಬಣ್ಣಿಸಿದರು.

‘ಕಾವ್ಯವನ್ನು ರಚಿಸುವ ಕವಿ ಎಂದಿಗೂ ಚಿರಂಜೀವಿ ಆಗುತ್ತಾನೆ. ಕಾವ್ಯವು ಸೌಂದರ್ಯ ಸ್ವರೂಪ. ಚಿರಂತನ ಚೈತನ್ಯ ದೀಪವಾಗಿದೆ. ಕವಿತೆ, ಕವನಗಳನ್ನು ಬರೆಯುವವರು ಆಸಕ್ತಿ ಕಳೆದುಕೊಳ್ಳಬಾರದು. ಮನಸ್ಸಿನಲ್ಲಿ ಮೂಡುವ ವಿಚಾರಗಳು ಕಾವ್ಯಗಳಾಗಿ ಹೊರಹೊಮ್ಮಬೇಕು’ ಎಂದು ತಿಳಿಸಿದರು.

ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆ ಮೇಲಣಗವಿಮಠ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿ ಹೊಸಮಠದ ಚಂದ್ರಶೇಖರ ಶಿವಯೋಗೀಂದ್ರ ಸ್ವಾಮೀಜಿ, ಬೇಬಿ ಗ್ರಾಮದ ದುರ್ದಂಡೇಶ್ವರ ಮಹಾಂತ ಶಿವಯೋಗಿಗಳ ಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಕೃತಿ ಬಿಡುಗಡೆ ಮಾಡಿದರು. ಕವಿ ಕೆ.ಸಿ.ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕವಿಗಳು ಕಾವ್ಯ ವಾಚಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಕಚಗುಳಿ ಇಟ್ಟರು. ಪ್ರೇಕ್ಷಕರ ಸಾಲಿನಲ್ಲಿ ಕುಳಿತ್ತಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕೆಲವೊತ್ತು ಕಾವ್ಯ ವಾಚನ ಆಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.