ADVERTISEMENT

ವಿಜಯಪುರ ಪ್ರಕರಣಕ್ಕೆ ಬಿಎಸ್‌ಪಿ ಖಂಡನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 8:36 IST
Last Updated 24 ಡಿಸೆಂಬರ್ 2017, 8:36 IST

ಹನೂರು: ವಿಜಯಪುರ ಘಟನೆಯ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ತಾಕೀತು ಮಾಡಬೇಕಾದ ಸರ್ಕಾರ ಬಾಲಕಿ ಪೋಷಕರಿಗೆ ಪರಿಹಾರ ನೀಡುವ ಮೂಲಕ ದಲಿತ ಹೆಣ್ಣುಮಕ್ಕಳ ಪ್ರಾಣ, ಮಾನಕ್ಕೆ ಬೆಲೆ ಕಟ್ಟುತ್ತಿದೆ ಎಂದು ಬಿಎಸ್‌‍ಪಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ದಲಿತ ಹಾಗೂ ಹಿಂದುಳಿದ ಸಮುದಾಯಗಳಿಗೆ ರಕ್ಷಣೆ ಇಲ್ಲದಂತಾಗಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಅತ್ಯಾಚಾರ, ದಲಿತರ ಹಾಗೂ ಹಿಂದುಳಿದ ವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಶಾಲಾ ಬಾಲಕಿ ಅತ್ಯಾಚಾರಕ್ಕೊಳಗಾಗಿ ಧಾರುಣವಾಗಿ ಕೊಲೆಗೀಡಾಗಿದ್ದಾಳೆ. ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಸೂಚಿಸಿ ನೈತಿಕತೆ ಪ್ರದರ್ಶಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಾಧನ ಸಮಾವೇಶವನ್ನು ನಡೆತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ADVERTISEMENT

ಅತ್ಯಾಚಾರವೆಸಗಿದ 6 ಜನರನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸುವವರೆಗೂ ಎರಡೂ ಪಕ್ಷಗಳು ತಮ್ಮ ಸಮಾವೇಶಗಳನ್ನು ಸ್ಥಗಿತಗೊಳಿಸಬೇಕು. ವಿಜಯಪುರ ಕೃತ್ಯದಿಂದಾಗಿ ಇಂದು ಶಾಲಾ, ಕಾಲೇಜಿನ ಹೆಣ್ಣುಮಕ್ಕಳು ಒಬ್ಬಂಟಿಯಾಗಿ ಸಂಚರಿಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಮಧ್ಯೆಪ್ರವೇಶಿಸಿ, ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಜ.15ರಿಂದ ಬೈಕ್ ರ‍್ಯಾಲಿ: ರಾಜ್ಯದಲ್ಲಿ ದಲಿತರು ಹಾಗೂ ಹಿಂದುಳಿದ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಪಕ್ಷದ ವತಿಯಿಂದ ಮೂರು ಹಂತದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎನ್. ಮಹೇಶ್ ಹೇಳಿದರು.

ಬೆಂಗಳೂರು, ಮೈಸೂರು, ದಾವಣಗೆರೆ, ಗುಲಬರ್ಗಾ ಮತ್ತು ಬಳ್ಳಾರಿ ಜಿಲ್ಲೆಗಳ ವಿಶ್ವವಿದ್ಯಾನಿಲಯಗಳಲ್ಲಿ ‘ಕೋರೆಗಾಂವ್‌ ವಿಜಯೋತ್ಸವ 200 ವರ್ಷಗಳು ಮುಂದೇನು’ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜ.15 ರಿಂದ 26ರ ವರೆಗೆ ‘ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ’ ಎಂಬ ಧ್ಯೇಯದೊಂದಿಗೆ ರಾಜ್ಯದಾದ್ಯಂತ 12 ದಿನಗಳ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದು, ಜ.26ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಕಾರ್ಯದರ್ಶಿ ಬಂಡಳ್ಳಿ ಕೆಂಪರಾಜು, ತಾಲ್ಲೂಕು ಉಪಾಧ್ಯಕ್ಷ ಮಂಡ್ಯ ಮಾದೇವ, ಕಾಮಗೆರೆ ಶಿವಪ್ರಸಾದ್, ಸಿಂಗನಲ್ಲೂರು ಪುಟ್ಟಸ್ವಾಮಿ, ಶಾಗ್ಯ ನಂದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.