ADVERTISEMENT

ವಿಜೃಂಭಣೆಯ ಯುಗಾದಿ ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:48 IST
Last Updated 13 ಏಪ್ರಿಲ್ 2013, 5:48 IST

ಕೊಳ್ಳೇಗಾಲ: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಮಹದೇಶ್ವರಸ್ವಾಮಿ ಮಹಾ ರಥೋತ್ಸವ ವೈಭವದಿಂದ ನಡೆಯಿತು.

ರಾಜ್ಯದ ವಿವಿಧೆಡೆ ಮತ್ತು ನೆರೆಯ ತಮಿಳುನಾಡಿನಿಂದ ಭಕ್ತರು ಆಗಮಿಸಿದ್ದರು. ಸಾಲೂರು ಬೃಹನ್ಮಠದ ಗುರುಸ್ವಾಮೀಜಿ ಮತ್ತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ.ಶಿವಲಿಂಗೇಗೌಡ, ವಿಶೇಷ ಆಡಳಿತಾ ಧಿಕಾರಿ ಜಯವಿಭವಸ್ವಾಮಿ, ದೇಗುಲದ ಅರ್ಚ ಕರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರ ಮುಗಿಲು ಮುಟ್ಟುವ ಜಯಘೋಷದೊಂದಿಗೆ ತೇರನ್ನು ಎಳೆಯಲಾಯಿತು.

ರಥದ ಮುಂದೆ ಹುಲಿವಾಹನ, ನಂದಿಕಂಬ, ನಾದಸ್ವರ ವಾದನ, ತಮಟೆಮೇಳ, ಮಹದೇಶ್ವರರ ಹಾಡಿನ ಜೊತೆ ದೇವರಗುಡ್ಡರ ಕುಣಿತ, ಸತ್ತಿಗೆ ಸೂರಿಪಾನಿಗಳ ಮೇಳ ಗಮನ ಸೆಳೆದವು.

ದೇವಾಲಯವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.  ಲಕ್ಷಾಂತರ ಭಕ್ತರು ಮಹಾ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ತಮಿಳುನಾಡಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಡಿ.ವೈ.ಎಸ್.ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.