ADVERTISEMENT

ವಿಜೃಂಭಣೆಯ ಸಿದ್ದೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 9:20 IST
Last Updated 7 ಏಪ್ರಿಲ್ 2012, 9:20 IST

ಕೊಳ್ಳೇಗಾಲ: ತಾಲ್ಲೂಕಿನ ಹೊಂಡರ ಬಾಳು ಗ್ರಾಮದಲ್ಲಿ ಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಸಿದ್ದೇಶ್ವರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಮಧುವನಹಳ್ಳಿ, ಕಾಮಗೆರೆ, ದೊಡ್ಡಿಂದುವಾಡಿ, ಇಕ್ಕಡಹಳ್ಳಿ, ಕೆಂಪನಪಾಳ್ಯ, ಲಕ್ಕರಸನಪಾಳ್ಯ, ತಿಮ್ಮರಾಜೀಪುರ, ಸಿದ್ದಯ್ಯನಪುರ, ಬಾಪೂನಗರ ಸೇರಿದಂತೆ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಹೊಂಡರಬಾಳು ಗ್ರಾಮದಲ್ಲಿ ಸಮಾವೇಶಗೊಂಡು ಸಿದ್ದೇಶ್ವರ ರಥೋತ್ಸವ ವೀಕ್ಷಿಸಿದರು.

ಹೊಂಡರಬಾಳು ಸಮೀಪದ ಸಿದ್ದೇಶ್ವರ ಬೆಟ್ಟಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ಸತ್ತಿಗೆ ಸೂರಿಪಾನಿ, ಬಸವ ಹಾಗೂ ಮಂಗಳವಾದ್ಯ ಸಮೇತ ಸಿದ್ದೇಶ್ವರಸ್ವಾಮಿ ವಿಗ್ರಹವನ್ನು ಮೆರವಣಿಗೆಯಲ್ಲಿ ರಥದ ಬಳಿಗೆ ತರಲಾಯಿತು.

ಪದ್ಧತಿಯಂತೆ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಾಯಿ ಹೊಡೆದು ನಂತರ ಸಹಸ್ರಾರು ಭಕ್ತರ ಘೋಷಣೆ ಯೊಡನೆ ಸಿದ್ದೇಶ್ವರಸ್ವಾಮಿ ವಿಗ್ರಹವನ್ನು ರಥಾರೋಹಣ ಮಾಡಲಾಯಿತು.

ರಥಾರೋಹಣಕ್ಕೂ ಮುನ್ನ ಗ್ರಾಮದ ರೈತರು ತಮ್ಮ ಎತ್ತುಗಳನ್ನು ಸಿಂಗರಿಸಿ ರಥದ ಬಳಿಗೆ ಕರೆತಂದು ಪಂಚಿನ ಸೇವೆ ಸಲ್ಲಿಸಿದರು. ರಥಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಭಕ್ತರು ರಥಕ್ಕೆ ಹಣ್ಣು ಜವನ ಎಸೆಯುವ ಹಾಗೂ ಧೂಪ ಹಾಕುವ ಮೂಲಕ ಭಕ್ತಿಭಾವ ಮೆರೆದರು. ರಥೋತ್ಸವ ಮುಗಿಯುತ್ತಿದ್ದಂತೆಯೇ ಬಿಸಿಲಿನ ಬೇಗೆಯಲ್ಲಿ ನಿಂತು ಬಳಲಿ ಬೆಂಡಾದ ಭಕ್ತ ಸಮೂಹಕ್ಕೆ ನೀರು ಮಜ್ಜಿಗೆ, ಪಾನಕ, ಷರಬತ್ತು ವಿತರಿಸಲಾಯಿತು.

ಮುಖಂಡರುಗಳಾದ ಮಹೇಶ್, ಶಿವಮಲ್ಲಪ್ಪ, ಮಲ್ಲೇಗೌಡ, ಗಿರಿಗೌಡ, ಗ್ರಾ.ಪಂ. ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷ ಸಿದ್ದಪ್ಪಸ್ವಾಮಿ, ನಂಜುಂಡ ಶೆಟ್ಟಿ, ಗ್ರಾ.ಪಂ. ಸದಸ್ಯ ಬಸವರಾಜ, ಡಾ. ಎಸ್. ಶಿವರುದ್ರಸ್ವಾಮಿ ಸೇರಿದಂತೆ ಅನೇಕ ಮುಖಂಡರು ಮಧುವನಹಳ್ಳಿ ಯಜಮಾನರು ಮುಖಂಡರು ಉಪಸ್ಥಿತರಿದ್ದರು.
ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕೊಂಡೋತ್ಸವ: ಹೊಂಡರಬಾಳು ಗ್ರಾಮದಲ್ಲಿ ಶನಿವಾರ ಸಂಜೆ ಸಿದ್ದೇಶ್ವರ ಜಾತ್ರೆ ಪ್ರಯುಕ್ತ ವಿಶೇಷ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಸಂಜೆ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ನಂತರ ಬೆಳಗಿನ ಜಾವ     ಕೊಂಡೋತ್ಸವ ನಡೆಯಲಿದೆ. ಕೊಂಡೋತ್ಸವದ ನಂತರ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಣ್ಮನ ಸೆಳೆಯುವ ಪಟಾಕಿ ಬಾಣ ಬಿರುಸು ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.