ADVERTISEMENT

ವ್ಯವಸಾಯಕ್ಕೆ ಜೀವಾಧಾರ ಕೃಷಿ ಹೊಂಡ

ನಾ.ಮಂಜುನಾಥ ಸ್ವಾಮಿ
Published 16 ಅಕ್ಟೋಬರ್ 2017, 5:49 IST
Last Updated 16 ಅಕ್ಟೋಬರ್ 2017, 5:49 IST
ಯಳಂದೂರು ತಾಲ್ಲೂಕಿನ ಆಮೆಕೆರೆ ಮಾರ್ಗದಲ್ಲಿ ನಿರ್ಮಿಸಿರುವ ಕೃಷಿ ಹೊಂಡ
ಯಳಂದೂರು ತಾಲ್ಲೂಕಿನ ಆಮೆಕೆರೆ ಮಾರ್ಗದಲ್ಲಿ ನಿರ್ಮಿಸಿರುವ ಕೃಷಿ ಹೊಂಡ   

ಯಳಂದೂರು: ನರೇಗಾ ಯೋಜನೆ ಮತ್ತು ಕೃಷಿ ಇಲಾಖೆಯ ಪ್ರಯತ್ನದ ಫಲವಾಗಿ ತಾಲ್ಲೂಕಿನ ರೈತರು ಜಲಸಾಕ್ಷರರಾಗುತ್ತಿದ್ದರೆ. ಕಳೆದ ವರ್ಷಗಳಲ್ಲಿ ಮಳೆಯ ಕಣ್ಣಾ ಮುಚ್ಚಾಲೆಯಿಂದ ಪರಿತಪಿಸಿದ್ದ ಜನ ನೀರನ್ನು ಸಂರಕ್ಷಿಸಲು ಈಗ ಕೃಷಿಹೊಂಡಗಳ ಮೊರೆ ಹೋಗಿದ್ದಾರೆ.

ಬೇಸಿಗೆಯಲ್ಲಿ ನೀರಿಲ್ಲದೆ ಪರಿತಪಿಸಿದ ಮಂದಿ ಇತ್ತೀಚಿಗೆ ಸುರಿದ ಮಳೆಯ ನೀರನ್ನು ಸಂರಕ್ಷಿಸಿ ಟೊಮೆಟೊ, ಮೆಣಸಿನಕಾಯಿ, ಜೋಳ, ಶೇಂಗಾ ಮೊದಲಾದ ಮಿಶ್ರ ಬೆಳೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಎರಡು ಎಕರೆ ಭೂಮಿ ಇದ್ದವರು ಕೃಷಿಹೊಂಡಾ ಯೋಜನೆ ನೆರವು ಪಡೆದು ವೈಜ್ಞಾನಿಕ ಕೃಷಿಯಿಂದ ಬಿತ್ತನೆ ಮಾಡಲು ಸಿದ್ಧತೆ ನಡೆಸಿದ್ದಾರೆ

‘4 ಎಕರೆಯಲ್ಲಿ ಮಿಶ್ರ ಬೇಸಾಯ ಮಾಡುತ್ತಿದ್ದೇನೆ. ತರಕಾರಿ ಬೆಳೆದಿದ್ದೇನೆ. ಕೃಷಿ ಇಲಾಖೆಯ ಸಹಾಯಧನದಲ್ಲಿ ಜಮೀನಿನಲ್ಲಿ ನಿರ್ಮಿಸಿದ ಕೃಷಿ ಹೊಂಡದಿಂದ ಅಗತ್ಯ ಇದ್ದಾಗ ಹನಿ ನೀರಾವರಿ ಮೂಲಕ ಬೆಳೆಗೆ ನೀರು ಒದಗಿಸುತ್ತೇನೆ. ಜಾನುವಾರುಗಳ ಅಗತ್ಯತೆಯೂ ನೀಗುತ್ತದೆ. ಮಳೆಗಾಲ ಹೊರತು ಪಡಿಸಿ ಜೋಳ ಮತ್ತು ರಾಗಿ ಬೆಳೆ ತೆಗೆಯಲು ನೀರು ಬಳಸುತ್ತೇನೆ’ ಎನ್ನುತ್ತಾರೆ ಮಲಾರಪಾಳ್ಯದ ಎಂ.ಸುರೇಶ.

ADVERTISEMENT

ಹಿಂದೆ ಜಲಾನಯನ ಪ್ರದೇಶಗಳ ನೀರು ವ್ಯರ್ಥವಾಗಿ ಕಾಲುವೆ ಪಾಲಾಗುತ್ತಿತ್ತು. ಅದನ್ನು ತಡೆದು ಸಂಗ್ರಹಿಸುವ ಪ್ರಯತ್ನ ಮಾಡಿರಲಿಲ್ಲ. ಈಗ ಅದರ ಅರಿವಾಗಿದೆ ಎನ್ನುತ್ತಾರೆ ಬೇಸಾಯಗಾರರು.

‘ಅಲ್ಪ ಮಳೆಗೂ ಬೆಟ್ಟಗಳ ಸರಣಿ ಅಂಚಿನಿಂದ ನೀರು ಗದ್ದೆಗಳತ್ತಾ ಹರಿಯುತ್ತದೆ. ಆ ನೀರನ್ನು ತಡೆ ಕಾಲುವೆ ಮೂಲಕ ಕೃಷಿ ಹೊಂಡಕ್ಕೆ ಹರಿಸಲಾಗುತ್ತದೆ.ಕನಿಷ್ಠ 2 ಸೆಂಟಿ ಮೀಟರ್ ಮಳೆ ಬಿದ್ದರೂ, ಸಾವಿರಾರು ಲೀಟರ್ ನೀರು ಶೇಖರವಾಗುತ್ತದೆ. ಇದು ಚಳಿಗಾಲದ ಬೆಳೆಗಳಾದ ಸೊಪ್ಪು, ಹೂ, ಕಡ್ಲೆ ಮತ್ತು ಸಣ್ಣ ಈರುಳ್ಳಿ ನಾಟಿಗೆ ಒದಗುತ್ತದೆ’ ಎನ್ನುತ್ತಾರೆ ಯಳಂದೂರಿನ ಯುವ ಕೃಷಿಕ ಎಸ್‌. ಕುಮಾರ್.

‘ನರೇಗಾ ಯೋಜನೆ ಮತ್ತು ಕೃಷಿ ಇಲಾಖೆ ರೈತರನ್ನು ಜಲ ಸಾಕ್ಷರರನ್ನಾಗಿಸಲು ಪ್ರಯತ್ನಿಸಿದ ಫಲ ದಿಂದ ಹೊಲ ಗದ್ದೆಗಳಲ್ಲಿ ಜೀವಜಲ ಕಾಣಬಹುದು. 2014–15ನೇ ಸಾಲಿನಿಂದ 2017–18ರ ತನಕ 362 ಕೃಷಿ ಹೊಂಡಗಳು, 160 ನೀರೆತ್ತುವ ಡೀಸೆಲ್ ಎಂಜಿನ್, 269 ತುಂತುರು ನೀರಾವರಿ ಘಟಕಗಳು ಹಾಗೂ ಕಂದಕ ಬದು ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ದೊಡ್ಡೆಗೌಡ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.