ADVERTISEMENT

ಶಿವನಸಮುದ್ರ: ವೈಕುಂಠ ಏಕಾದಶಿಗೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 11:00 IST
Last Updated 6 ಜನವರಿ 2012, 11:00 IST

ಕೊಳ್ಳೇಗಾಲ: ಆದಿರಂಗ, ಮಧ್ಯರಂಗ ಹಾಗೂ ಅಂತ್ಯರಂಗನಾಥ ದೇವಾಲಯಗಳಲ್ಲಿ ಒಂದೇ ದಿನ ಪೂಜೆ ಸಲ್ಲಿಸಿದಲ್ಲಿ ಪುಣ್ಯ ದೊರೆಯುತ್ತದೆ ಎಂಬ ಪ್ರತೀತಿ ಹಿನ್ನೆಲೆಯಲ್ಲಿ ಗುರುವಾರ ತಾಲ್ಲೂಕಿನ ಶಿವನಸಮುದ್ರ ಮಧ್ಯರಂಗನಾಥ ದೇವಾಲಯಕ್ಕೆ ಜನಸಾಗರ ಹರಿದುಬಂದಿತು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಆದಿರಂಗನಾಥ ಸ್ವಾಮಿ, ಶಿವನಸಮುದ್ರದ ಮಧ್ಯರಂಗನಾಥ ಹಾಗೂ ತಮಿಳುನಾಡಿನ ಶ್ರೀರಂಗಂ ರಂನಾಥ ದೇವಾಲಯಗಳಿಗೆ ವೈಕುಂಠ ಏಕಾದಶಿಯ ದಿನ ಪೂಜೆ ಸಲ್ಲಿಸುವಸುವುದು ಬಹಳ ವರ್ಷಗಳ ವಾಡಿಕೆ. ಗುರುವಾರ ಶ್ರೀರಂಗಪಟ್ಟಣದ ಆಧಿರಂಗನಾಥಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿದ ಭಕ್ತರು ಗುರುವಾರ ಬೆಳಗಿನ ಜಾವವೇ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸಮೀಪದ ಶಿವನಸಮುದ್ರ ಮಧ್ಯರಂಗನಾಥ ಸ್ವಾಮಿ ದೇವಾಲಯಕ್ಕೆ ಆಗಮಿಸಿ ವೈಕುಂಠ ಏಕಾದಶಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ರಂಗನಾಥಸ್ವಾಮಿ ದೇವಾಲಯವನ್ನು ತಳಿರುತೋರಣ, ವರ್ಣಮಯ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ರಂಗನಾಥಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಗುರುವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ದೇವಾಲಯಕ್ಕೆ ಈ ದಿನ ದಂದು ಆಗಮಿಸುವ ಎಲ್ಲ ಭಕ್ತರು ಸ್ವರ್ಗದ ಬಾಗಿಲು ಪ್ರವೇಶಿ ಸಲು ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ದೇವಾಲಯಕ್ಕೆ ಆಗ ಮಿಸುವ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಉಪವಿಭಾಗಾಧಿಕಾರಿ ಎ.ಬಿ. ಬಸವರಾಜು, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಎಂ. ಶೈನಿ ಮತ್ತಿತರ ಗಣ್ಯರು ಪೂಜೆ ವೇಳೆ  ಹಾಜರಿದ್ದರು. ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜು, ರಾಮಚಂದ್ರ, ಶ್ರೀಧರ್, ರಾಜಸ್ವ ನಿರೀಕ್ಷಕ ಶಿವಮಲ್ಲಪ್ಪ ಹಾಗೂ ಕಂದಾಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.