ADVERTISEMENT

ಸಂಸದ ಧ್ರುವನಾರಾಯಣ ತಿರುಗೇಟು

ಸಮಾವೇಶದಲ್ಲಿ ರಾಹುಲ್‌ ಗಾಂಧಿಯನ್ನು ಪಾಪಾ ಪಾಂಡುಗೆ ಹೋಲಿಸಿದ್ದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 6:49 IST
Last Updated 5 ಏಪ್ರಿಲ್ 2018, 6:49 IST

ಕೊಳ್ಳೇಗಾಲ: ‘ಬಿಎಸ್‍ಪಿ ಮತ್ತು ಜೆಡಿಎಸ್ ಮೈತ್ರಿಯ ಕಾರ್ಯಕ್ರಮದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು  ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ಅವರನ್ನು ಪಾಪಾಪಾಂಡುಗೆ ಹೋಲಿಕೆ ಮಾಡಿ ಮಾತನಾಡಿರುವುದು ಸರಿಯಲ್ಲ’ ಎಂದು ಸಂಸದ ಆರ್.ಧ್ರುವನಾರಾಯಣ ಆರೋಪಿಸಿದರು. ಈ ಹಿಂದೆ ರಾಹುಲ್‍ ಗಾಂಧಿ ಅವರು ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷರಾಗಿ, ಈಗ ಅಧ್ಯಕ್ಷರಾಗಿದ್ದಾರೆ. ಅವರು ಯುಪಿಎ ಸರ್ಕಾರವಿದ್ದಾಗಲೂ ಸಹ ಸಚಿವ ಸ್ಥಾನಕ್ಕೆ ಆಸೆ ಪಡದೆ ದೇಶದ ಜನರ ಹಿತ ಕಾಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‘2008ರಲ್ಲಿ ರಾಹುಲ್‍ ಗಾಂಧಿ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಬುಡಕಟ್ಟು ಜನಾಂಗದ ಜೊತೆ ಸಂವಾದ ನಡೆಸಿದ್ದರು.ಅವರಿಗೆ ಅನುಕೂಲವಾಗುವಂತೆ ಅರಣ್ಯ ಕಾಯ್ದೆ ಜಾರಿಗೊಳಿಸಲು ಕ್ರಮ ಕೈಗೊಂಡರು ಹಾಗೂ ಬುಡಕಟ್ಟು ಜನರಿಗೆ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ’ ಎಂದರು.

ಸರ್ಕಾರ ಸ್ವಾಧೀನಪಡಿಸಿಕೊಂಡ ಭೂಮಿ ಮಾಲೀಕರಿಗೆ ಪರಿಹಾರ ಹಣವನ್ನು ನಾಲ್ಕರಷ್ಟು ಹೆಚ್ಚಳ ಮಾಡಿದ್ದಾರೆ. ಅಂತವರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯನವರೂ ಕಾರಣ. ಸಿದ್ದರಾಮಯ್ಯ ಅವರ ಬೆಂಬಲಿಗರೇ ಸುಮಾರು 35 ಶಾಸಕರು ಇದ್ದರು. ಆದ್ದರಿಂದಲೇ ಕುಮಾರಸ್ವಾಮಿ 20 ತಿಂಗಳು ಮುಖ್ಯಮಂತ್ರಿಯಾದರು. ಅಂಥವರ ಬಗ್ಗೆ ದುರಂಕಾರದ ಪದ ಬಳಕೆ ಮಾಡುವುದು ತರವಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮರಿಸ್ವಾಮಿ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಶಿವಕುಮಾರ್, ಬ್ಲಾಕ್  ಕಾಂಗ್ರೆಸ್‌ ಅಧ್ಯಕ್ಷ ತೋಟೆಶ್, ಶಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT