ಚಾಮರಾಜನಗರ: ತಾಲ್ಲೂಕಿನ ಹೊಮ್ಮ ಗ್ರಾಮದಲ್ಲಿ ಸೋಮವಾರ ಸಣ್ಣಈರುಳ್ಳಿಗೆ ಕೂಡಲೇ ರಾಜ್ಯ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ರಸ್ತೆಗೆ ಈರುಳ್ಳಿ ಸುರಿದು ಆಕ್ರೋಶ ವ್ಯಕ್ತಪಡಿಸಿದ ರೈತರು, ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ಪ್ರಸ್ತುತ ಸಣ್ಣಈರುಳ್ಳಿ ಧಾರಣೆ ಕುಸಿದಿದೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಆದರೆ, ಸರ್ಕಾರ ಮಾತ್ರ ಬೆಂಬಲ ಬೆಲೆ ನಿಗದಿ ಮಾಡಲು ಮುಂದಾಗಿಲ್ಲ ಎಂದು ದೂರಿದರು.
ಬೆಲೆ ಕುಸಿದಿರುವ ಪರಿಣಾಮ ಜಮೀನಿನಲ್ಲಿರುವ ಈರುಳ್ಳಿ ಕಟಾವು ಆಗಿಲ್ಲ. ಸಂಪೂರ್ಣವಾಗಿ ಕೊಳೆತು ಹೋಗುತ್ತಿದೆ. ಉತ್ಪಾದನಾ ವೆಚ್ಚವೂ ಕೈಸೇರಿಲ್ಲ. ಇದರಿಂದ ಬದುಕು ನಡೆಸುವುದು ಕಷ್ಟವಾಗಲಿದೆ. ಕೂಡಲೇ, ರೈತರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಅರಿಸಿನದ ಬೆಲೆಯೂ ತೀವ್ರವಾಗಿ ಕುಸಿದಿದೆ. ಆದರೆ, ಸರ್ಕಾರ ಬೆಂಬಲ ಬೆಲೆ ನಿಗದಿಗೆ ಮುಂದಾಗಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಬೆಂಬಲ ಬೆಲೆ ನಿಗದಿಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿಲ್ಲ. ಸರ್ಕಾರ ಕೂಡ ದಿವ್ಯನಿರ್ಲಕ್ಷ್ಯವಹಿಸಿರುವ ಪರಿಣಾಮ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ.
ಕೂಡಲೇ, ಈ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಹೊಮ್ಮ ಗ್ರಾಮಸ್ಥರು, ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.