ADVERTISEMENT

ಸಮಸ್ಯೆಗಳ ಆಗರ ಗಂಗಾಮತಸ್ಥರ ಬೀದಿ

ಅಮಿತ್ ಎಂ.ಎಸ್.
Published 19 ಜೂನ್ 2017, 7:34 IST
Last Updated 19 ಜೂನ್ 2017, 7:34 IST
ಗಂಗಾಮತಸ್ಥರ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಸದ ತೊಟ್ಟಿಯಾಗಿದೆ
ಗಂಗಾಮತಸ್ಥರ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಸದ ತೊಟ್ಟಿಯಾಗಿದೆ   

ಚಾಮರಾಜನಗರ: ಈ ಓಣಿ ಎದುರು ಗೊಳ್ಳುವುದೇ ಕಸದ ರಾಶಿ ಮೂಲಕ. ಮುಂದೆ ಹೋದಂತೆ ಇನ್ನಷ್ಟು ಸಮಸ್ಯೆ ಗಳ ದರ್ಶನವಾಗುತ್ತದೆ. ಕಾಮಗಾರಿಗಾಗಿ ಒಡೆದು ಹಾಕಿದ್ದರಿಂದ ಮಣ್ಣಿನ ಗುಡ್ಡದಂತೆ ರೂಪಾಂತರಗೊಂಡ ರಸ್ತೆ, ಹರಿಯಲು ಜಾಗವಿಲ್ಲದೆ ಮನೆಗಳ ಎದುರೇ ನಿಂತ ಕೊಳಚೆ ನೀರು, ಹುಳುಗಳು ತುಂಬಿರುವ ಕುಡಿಯುವ ನೀರು, ಸೊಳ್ಳೆಗಳ ಹಾವಳಿ... ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇದು ನಗರದ ಹೃದಯ ಭಾಗದಲ್ಲಿರುವ ಗಂಗಮತಸ್ಥರ ಬೀದಿಯ ಚಿತ್ರಣ. ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲೇ ಇದ್ದು, ಇನ್ನೊಂದೆಡೆ ಚಾಮರಾಜೇಶ್ವರ ದೇವಸ್ಥಾನದ ಎದುರಿ ನಲ್ಲಿಯೇ ಚಾಚಿಕೊಂಡಿದೆ. ಹೀಗಿದ್ದೂ, ಶುಚಿತ್ವ ಮತ್ತು ಮೂಲಸೌಕರ್ಯಗಳಿಲ್ಲಿ ಮರೀಚಿಕೆಯಾಗಿವೆ.

ಯುಜಿಡಿ ಕಾಮಗಾರಿಯ ಕಾರಣ ದಿಂದ ನಗರದ ಬಹುತೇಕ ಭಾಗಗಳಲ್ಲಿ ರಸ್ತೆಗಳ ಅವ್ಯವಸ್ಥೆ ಸಾಮಾನ್ಯವಾಗಿದೆ. ಆದರೆ, ಈ ಬೀದಿಯಲ್ಲಿ ಅದರಿಂದ ಉಂಟಾದ ನಕಾರಾತ್ಮಕ ಪರಿಣಾಮ ದುಪ್ಪಟ್ಟು. ಕಾಮಗಾರಿ ಆರಂಭವಾದ ಬಳಿಕವೇ ಇಲ್ಲಿ ಸಮಸ್ಯೆಗಳು ಹೆಚ್ಚಾಗಿವೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.

ADVERTISEMENT

ರಸ್ತೆಯೇ ಕಸದ ತೊಟ್ಟಿ!: ಗಾರೆ ವೃತ್ತಿ ಯನ್ನು ಅವಲಂಬಿಸಿರುವವರೇ ಹೆಚ್ಚು ನೆಲೆಸಿರುವ ಈ ಬೀದಿಗೆ ಭುವನೇಶ್ವರಿ ವೃತ್ತದಿಂದ ಸಂಪರ್ಕ ಕಲ್ಪಿಸುವ ಕಿರಿದಾದ ರಸ್ತೆ ಕಸದ ತೊಟ್ಟಿಯಾಗಿ ಬದಲಾಗಿದೆ. ಒಳಚರಂಡಿ ಕೆಲಸಕ್ಕಾಗಿ ರಸ್ತೆಯನ್ನು ಅಗೆದು ಮುಚ್ಚಿದ ಬಳಿಕ ಸುತ್ತಮುತ್ತಲಿನ ಹೋಟೆಲ್‌ನವರು ವ್ಯರ್ಥವಾದ ಆಹಾರ ಪದಾರ್ಥಗಳನ್ನು ಇಲ್ಲಿಯೇ ಸುರಿಯುತ್ತಿದ್ದಾರೆ.

ಅಂಗಡಿಯವರು ಮತ್ತು ಕೆಲವು ಮನೆಯವರು ಕೂಡ ಕಸ ಬಿಸಾಡುತ್ತಾರೆ. ಇದರಿಂದ ರಸ್ತೆ ಬಿಡಾಡಿ ದನಗಳು, ನಾಯಿಗಳ ಆವಾಸ ಸ್ಥಾನವಾಗಿದೆ. ಇಡೀ ರಸ್ತೆ ಗಬ್ಬೆದ್ದು, ಓಡಾಡಲು ಅಸಹನೀಯ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸುತ್ತಾರೆ.

ದುರಸ್ತಿಯಾಗದ ರಸ್ತೆ: ಯುಜಿಡಿ ಕಾಮಗಾರಿಗಾಗಿ ಈ ಬೀದಿಯ ಡಾಂಬರು ರಸ್ತೆಯನ್ನು ಐದು ವರ್ಷಗಳ ಹಿಂದೆಯೇ ಅಗೆಯಲಾಗಿದೆ. ಚರಂಡಿ, ಮ್ಯಾನ್‌ಹೋಲ್‌ ಮತ್ತು ಚೇಂಬರ್‌ಗಳ ನಿರ್ಮಾಣದ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ.

ಮ್ಯಾನ್‌ಹೋಲ್‌ ನಿರ್ಮಾಣ ಕಾರ್ಯ ಮುಗಿದು ಮೂರು ತಿಂಗಳೇ ಕಳೆದಿದೆ. ಕಾಮಗಾರಿಗಾಗಿ ತೆಗೆದಿದ್ದ ಮಣ್ಣನ್ನು ಹಾಗೆಯೇ ಮುಚ್ಚಿ ಬಿಡ ಲಾಗಿದೆ. ಇನ್ನೂ ಡಾಂಬರ್‌ ಹಾಕಿಲ್ಲ. ಇದರಿಂದ ಮಳೆ ಬಂದರೆ ಓಡಾಡು ವುದೇ ಅಸಾಧ್ಯವಾಗಿದೆ. ಪಕ್ಕದ ಕುರುಬರ ಬೀದಿಯಲ್ಲಿಯೂ ಇತ್ತೀಚೆ ಗಷ್ಟೇ ಯುಜಿಡಿ ಕೆಲಸ ಮುಗಿದಿದೆ. ಆದರೆ, ಈಗಾಗಲೇ ಡಾಂಬರು ಹಾಕಲಾಗಿದೆ ಎಂದು ಸ್ಥಳೀಯರಾದ ರಾಜಮ್ಮ ಹೇಳಿದರು.

ಚೇಂಬರ್ ಗುಂಡಿಗಳಿಗೆ ಮುಚ್ಚಳ ಅಳವಡಿಸಿಲ್ಲ. ಇದರಿಂದ ಅವುಗಳ ಒಳಗೆ ಮಣ್ಣು, ಕಸಕಡ್ಡಿಗಳು ತುಂಬಿ ಕೊಂಡಿವೆ. ಹಳೆಯ ಮ್ಯಾನ್‌ಹೋಲ್‌ಗಳ ಮೂಲಕವೇ ಕೊಳಚೆ ನೀರು ಹರಿಯ ಬೇಕಾಗಿದ್ದು, ಅವು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಬಚ್ಚಲು ನೀರು ಅಲ್ಲಿಯೇ ಕಟ್ಟಿ ನಿಲ್ಲುತ್ತಿವೆ. ಹಳೆಯ ಚರಂಡಿಗಳೂ ಅಗಲವಾಗಿಲ್ಲ.

ನಗರಸಭೆಯವರು ತಿಂಗಳಿಗೊಮ್ಮೆ ಮೋರಿಯ ಕಸ ತೆಗೆಯುತ್ತಾರೆ. ಅದನ್ನು ವಿಲೇವಾರಿ ಮಾಡದೆ, ಅಲ್ಲಿಯೇ ಬಿಟ್ಟು ಹೋಗುತ್ತಾರೆ. ಅದು ಮತ್ತೆ ಚರಂಡಿ ಸೇರಿಕೊಳ್ಳುತ್ತದೆ ಎಂದು ನಿವಾಸಿಗಳು ದೂರಿದರು.

ಡೆಂಗಿ ಭಯ: ಇಲ್ಲಿ ಸೊಳ್ಳೆ ಕಾಟ ವಿಪರೀತ ವಾಗಿದೆ. ನಗರಸಭೆ ಬಿಡುವ ನೀರಿನಲ್ಲಿ ಹಳದಿ ಹುಳಗಳಿರುತ್ತವೆ. ಹೀಗಾಗಿ ಇಲ್ಲಿನ ಜನರಲ್ಲಿ ಡೆಂಗಿ, ಚಿಕೂನ್‌ ಗುನ್ಯಾ ಭೀತಿ ಉಂಟಾಗಿದೆ. ಈಗಾಗಲೇ ಇಬ್ಬರು ಮಕ್ಕಳಿಗೆ ಡೆಂಗಿ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದರು.

* * 

ರಾತ್ರಿ ಏಳೂವರೆ ಎಂಟು ಗಂಟೆಯಾದರೂ ಬೀದಿ ದೀಪ ಹಾಕುವುದಿಲ್ಲ. ಇಲ್ಲಿ ಬೀದಿ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಮಕ್ಕಳನ್ನು ಹೊರಗೆ ಬಿಡಲು ಭಯವಾಗುತ್ತದೆ
ಶಕುಂತಲಾ
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.