ADVERTISEMENT

ಸಮಸ್ಯೆಗಳ ಬೇಗುದಿಯಲ್ಲಿ ಬೇಗೂರು!

ಎನ್.ನಾಗರಾಜ್
Published 13 ಜೂನ್ 2011, 10:05 IST
Last Updated 13 ಜೂನ್ 2011, 10:05 IST

ವಿಶೇಷ ವರದಿ
ಗುಂಡ್ಲುಪೇಟೆ:
ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ವಿವಿಧ ಬೀದಿಗಳಲ್ಲಿ ಚರಂಡಿ ಹೂಳು ತುಂಬಿಕೊಂಡಿದ್ದು, ಚರಂಡಿ ನೀರು ರಸ್ತೆಯಲ್ಲಿ ಮೇಲ್ಬಾಗದಲ್ಲಿಯೇ ಹರಿಯುದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಬೇಗೂರು ಗ್ರಾಮದ ಚರಂಡಿಗಳು ಕಸದಿಂದ ತುಂಬಿ ತುಳುಕುತ್ತಿದ್ದರೂ ಗ್ರಾಮ ಪಂಚಾಯಿತಿ ಸ್ವಚ್ಛಗೊಳಿಸದೇ ಇರುವುದರಿಂದ ರಾತ್ರಿ ವೇಳೆ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು, ಇದರಿಂದ ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ.

ಮಳೆಗಾಲದಲ್ಲಿ ಚರಂಡಿ ನೀರು ರಸ್ತೆಯ ಮೇಲೆ  ಹರಿಯುವುದರಿಂದ ವಯೋವೃದ್ಧರು ಹಾಗೂ ಪಾದಚಾರಿಗಳು ಓಡಾಡಲು ತೊಂದರೆಯಾಗಿದೆ. ಈ ಬಗ್ಗೆ ಅನೇಕ ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬೇಗೂರು ಗ್ರಾಮದಲ್ಲಿ ಮೈಸೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿ ಇದ್ದು, ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ನೀರು ನಿಲ್ಲುವುದರಿಂದ ಪಾದಚಾರಿಗಳ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ ಎಂದು ದೂರಿದ್ದಾರೆ.

ಬೇಗೂರು ಗ್ರಾಮದಲ್ಲಿನ ರಸ್ತೆಗಳು ಡಾಂಬರೀಕರಣವಾಗಿಲ್ಲದ ಕಾರಣ ಮಳೆಗಾಲದಲ್ಲಿ ರಸ್ತೆ ತುಂಬಾ ಕೆಸರು ನಿಲ್ಲುವುದರಿಂದ ಸಾರ್ವಜನಿಕರ ವಾಹನಗಳು ಹಾಗೂ ಪಾದಚಾರಿಗಳು ಓಡಾಡಲು ಕಷ್ಟಸಾಧ್ಯವಾಗಿದೆ. ಇನ್ನಾದರೂ ಸಂಬಂಧಪಟ್ಟವರು ರಸ್ತೆ ದುರಸ್ತಿ ಪಡಿಸಿ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪದ ಸೌಲಭ್ಯ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.