ADVERTISEMENT

ಸರೋಜಮ್ಮ ಪಾಪೇಗೌಡರಿಗೆ ರಾಜ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:35 IST
Last Updated 2 ಜನವರಿ 2012, 10:35 IST

ಯಳಂದೂರು: ತಾಲ್ಲೂಕಿನ ಮಾಂಬಳ್ಳಿ ಗ್ರಾಮದ  ಪ್ರಸಿದ್ಧ ಉದ್ಯಮಿ ಮಾಂಬಳ್ಳಿ ಕೆ.ಪಾಪೇಗೌಡರವರ ಧರ್ಮಪತ್ನಿ ಸರೋಜಮ್ಮ ಪಾಪೇಗೌಡರವರಿಗೆ 2009-10 ನೇ ಸಾಲಿನಲ್ಲಿ ಸಾಂಪ್ರಾದಾಯಿಕ ಪ್ರದೇಶದ ಮಲ್ಟಿ ಎಂಡ್ ಬೇಸಿನ್ ರೇಷ್ಮೆ ಬಿಚ್ಚಣಿಕೆಯಲ್ಲಿ ತೋರಿದ ಅಪ್ರತಿಮ ಸಾಧನೆಗಾಗಿ ರಾಜ್ಯ ಮಟ್ಟದ ರೇಷ್ಮೆ ಕೃಷಿ ಪ್ರಶಸ್ತಿ ಲಭಿಸಿದೆ.

ಮಾಂಬಳ್ಳಿಯಲ್ಲಿ 2008ರಲ್ಲಿ ಸಾಂಪ್ರ ದಾಯಿಕ ಪ್ರದೇಶದ ಮಲ್ಟಿ ಎಂಡ್ ಬೇಸಿನ್ ರೇಷ್ಮೆ ನೂಲು ಬಿಚ್ಚಣಿಕೆ ಕಾರ್ಖಾನೆಯನ್ನು ಪ್ರಾರಂಭಿಸಿದ ಸರೋಜಮ್ಮ ಪಾಪೇಗೌಡ ಅವರು ಆ ಮುಖಾಂತರ ಸುಮಾರು 40ಕ್ಕೂ ಹೆಚ್ಚು ನಿರುದ್ಯೋಗಿ ರೇಷ್ಮೆ  ಕಾರ್ಮಿಕರಿಗೆ ಆಶಾಕಿರಣವಾಗಿದ್ದಾರೆ. ತಾಲ್ಲೂಕಿನಲ್ಲಿ ನಶಿಸಿ ಹೋಗುತ್ತಿರುವ ರೇಷ್ಮೆ ಉದ್ಯಮವನ್ನು ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ಶಕ್ತಿಮೀರಿ   ಶ್ರಮಿಸುತ್ತಿದ್ದಾರೆ.

ಈ ವಿಶಿಷ್ಟ ಸಾಧನೆಯನ್ನು ಗುರುತಿಸಿದ ರಾಜ್ಯ ಸರ್ಕಾರ ಸರೋಜಮ್ಮ ಅವರಿಗೆ ಇತ್ತೀಚಿಗೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಜ್ಯಮಟ್ಟದ ರೇಷ್ಮೆ ಕೃಷಿ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ರಾಜ್ಯ ಕಾರ್ಮಿಕ ಹಾಗೂ ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಅವರು ನೀಡಿ ಸನ್ಮಾನಿಸಿದ್ದಾರೆ.

ಈ ಸಂದರ್ಭದಲ್ಲಿ  ಶಾಸಕ ರೋಷನ್ ಬೇಗ್, ರಾಜ್ಯ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಹಾಗೂ ರೇಷ್ಮೆ  ನಿರ್ದೇಶಕರಾದ ಡಾ. ಎನ್. ನಾಗಾಲಾಂಬಿಕಾ ದೇ, ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ವಂದಿತ ಶರ್ಮಾ,  ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷರಾದ ಬಿ.ಜಯಕುಮಾರ್, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಹನುಮಂತರಾಯಪ್ಪ, ಆಡಳಿತ ಮಂಡಳಿಯ ನಿರ್ದೇಶಕ ಪರಮೇಶ ಪಾಂಡೆ, ರಾಜ್ಯ ಹ್ಯಾಂಡ್‌ಲೂಮ್ ಅಧ್ಯಕ್ಷ ಲಕ್ಷ್ಮೀ ನಾರಾಯಣ್, ಮುಡಿಗುಂಡಂ ರೇಷ್ಮೆ ನೂಲು ಮಾರುಕಟ್ಟೆಯ ಉಪ ನಿರ್ದೇಶಕ ಬಸವಣ್ಣ ಮುಂತಾದವರು ಉಪಸ್ಥಿತರಿದ್ದರು.

ಅಭಿನಂದನೆ: 2009-10ನೇ ಸಾಲಿನ ರಾಜ್ಯಮಟ್ಟದ ಸಾಂಪ್ರದಾಯಿಕ ಪ್ರದೇಶದ ಮಲ್ಟಿ ಎಂಡ್ ಬೇಸಿನ್ ರೇಷ್ಮೆ ನೂಲು ಬಿಚ್ಚಣಿಕೆಯಲ್ಲಿ ರಾಜ್ಯ ಸರ್ಕಾರದ ಮನ್ನಣೆ ಪಡೆದು ತೃತೀಯ ಬಹುಮಾನ ಪಡೆದ ಸರೋಜಮ್ಮ ಅವರನ್ನು  ಗ್ರಾಮಸ್ಥರು ಹಾಗೂ ಅವರ ಸಿಬ್ಬಂದಿವರ್ಗ ಅಭಿನಂದಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.