ಚಾಮರಾಜನಗರ: ಭ್ರಷ್ಟಾಚಾರ ರಹಿತ ಕ್ಷೇತ್ರವೆಂದರೆ ಸಹಕಾರಿ ಕ್ಷೇತ್ರ ಮಾತ್ರ. ಆದರೆ ಪಟ್ಟಭದ್ರ ವ್ಯಕ್ತಿಗಳ ಹಿಡಿತದಲ್ಲಿ ಸಿಲುಕಿ ದೂಳೀಪಟವಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸಹಕಾರ ಸಂಘದವರು ರಾಜಕೀಯದಿಂದ ದೂರ ಉಳಿದರೆ ಮಾತ್ರ ಸಹಕಾರಿ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಎಂದು ಜಿಲ್ಲಾ ಹಾಪ್‌ಕಾಮ್ಸ ಅಧ್ಯಕ್ಷ ಕೋಡಿಮೋಳೆ ರಾಜಶೇಖರ್ ಅಭಿಪ್ರಾಯಪಟ್ಟರು.
ಸಮೀಪದ ರಾಮಸಮುದ್ರದಲ್ಲಿರುವ ಡಾ.ರಾಜ್‌ಕುಮಾರ್ ಕ್ಷೀರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಹಾಗೂ ಜಿಲ್ಲೆಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಕಾರ್ಯಕ್ರಮವಾಗಿ ಸಹಕಾರ ಸಪ್ತಾಹ ರಾಷ್ಟ್ರ ವ್ಯಾಪ್ತಿ ನಡೆಯಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಿಂದಲೇ ಪ್ರಾಥಮಿಕ ಹಂತದ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಸಹಕಾರಿ ಸಂಘದ ನಿರ್ದೇಶಕರು ಚುನಾವಣೆ ಸಂದರ್ಭದಲ್ಲಿ ಮಾತ್ರ ಸಂಘದ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ. ತದನಂತರ ಯಾವುದೇ ಕಾರ್ಯಕ್ರಮಗಳಿಗೆ ಬರುವುದಿಲ್ಲ. ಹೀಗಾಗಿ ಸಹಕಾರಿ ಕ್ಷೇತ್ರದಲ್ಲಿನ ಸಮಸ್ಯೆ ಮತ್ತಷ್ಟು ಗಟ್ಟಿಯಾಗುತ್ತಿದೆ ಎಂದು ವಿಷಾದಿಸಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಸಹಕಾರಿ ಸಂಘದ ಬ್ಯಾಂಕ್ ಮೂಲಕ ರೈತರು ಹೆಚ್ಚಿನ ಅನುಕೂಲ ಪಡೆಯುತ್ತಿದ್ದಾರೆ. ಸಹಕಾರ ಸಂಘಗಳಿಗೆ ಕಾನೂನು ತಿದ್ದುಪಡಿ ತರುವ ಮೊದಲು ಎಲ್ಲರ ಅಭಿಪ್ರಾಯ ಸಂಗ್ರಹಿಸಬೇಕು ಎಂದರು.
ಮೈಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ನಿವೃತ್ತ ಸಹಾಯಕ ಸಹಕಾರ ಶಿಕ್ಷಣಾಧಿಕಾರಿ ಬಿ.ಎನ್.ಉತ್ತಪ್ಪ ವಿಷಯ ಮಂಡಿಸಿದರು. ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿ.ಕುಮಾರಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಎಂ.ಬಸವಣ್ಣ, ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ವೈ.ಎಸ್. ಸದಾಶಿವಯ್ಯ, ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಸಿ.ಶಿವಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.