ADVERTISEMENT

‘ಸಾಧನೆ ಬಗ್ಗೆ ಜನರಿಗೆ ತಿಳಿಸೋಣ’

ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ: ಚಾಮರಾಜನಗರದಲ್ಲಿ ಚಿಂತನಾ ಸಭೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 8:59 IST
Last Updated 11 ಜೂನ್ 2018, 8:59 IST

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಉತ್ತಮ ಸಾಧನೆ ಮತ್ತು ಜನಪರ ಕೆಲಸಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿ ಹೇಳಲು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಬೇಕು ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಭಾನುವಾರ ಇಲ್ಲಿ ಕರೆ ನೀಡಿದರು.

ಪಟ್ಟಣದ ಮಹಾವೀರ ಭವನದಲ್ಲಿ ನಡೆದ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 4 ವರ್ಷಗಳ ಸಾಧನೆಯ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರಕ್ಕೆ ನಾಲ್ಕು ವರ್ಷಗಳು ತುಂಬಿರುವ ಹೊತ್ತಿನಲ್ಲಿ ಮತ್ತು ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಇರುವುದರಿಂದ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಅರ್ಥ ಮಾಡಿಸುವ ಅನಿವಾರ್ಯತೆ ಇದೆ’ ಎಂದರು.

‘ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಐದು ವರ್ಷ ಆಡಳಿತ ನಡೆಸಿ ಚುನಾವಣೆ ಸೋತ ಬಳಿಕ, ಸರ್ಕಾರದ ಸಾಧನೆಗಳ ಬಗ್ಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಿಳಿ ಹೇಳಲು ಪಕ್ಷದ ಕಾರ್ಯಕರ್ತರು ವಿಫಲರಾದರು ಎಂದು ವಾಜಪೇಯಿ ಹೇಳಿದ್ದರು. ಈ ಬಾರಿ ಅದು ಪುನರಾವರ್ತನೆ ಆಗಬಾರದು’ ಎಂದು ಹೇಳಿದರು.

ADVERTISEMENT

ಮುದ್ರಾ ಸಾಲ ಯೋಜನೆ, ಜನಧನ್‌ ಯೋಜನೆ, ಜಿಎಸ್‌ಟಿ, ನೋಟು ರದ್ದತಿ ಸೇರಿದಂತೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ರೂಪಿಸಿರುವ ಯೋಜನೆಗಳನ್ನು ಪಟ್ಟಿ ಮಾಡಿದ ಅವರು, ‘ಕ್ರಾಂತಿಕಾರಕ ನಿರ್ಧಾರಗಳು ಮತ್ತು ಜನಪರ ಯೋಜನೆಗಳಿಂದಾಗಿ ಸಮಾಜದಲ್ಲಿ ಊಹಿಸಲು ಸಾಧ್ಯವಾಗದ ರೀತಿಯ ಬದಲಾವಣೆಗಳಾಗಿವೆ. ಎಷ್ಟೋ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ. ಅಂತಹವರಿಗೆ ಪಕ್ಷದ ಕಾರ್ಯಕರ್ತರು ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದರು.

‘ಮೋದಿ ಆಡಳಿತದ ಬಗ್ಗೆ ವಿರೋಧ ಪಕ್ಷಗಳ ಮುಖಂಡರು ಹೇಳುವ ಮಾತುಗಳನ್ನು, ಮಾಡುವ ಆರೋಪಗಳನ್ನು ತಲೆಗೆ ಹಾಕಿಕೊಳ್ಳಬೇಕಾಗಿಲ್ಲ. ತಂಡ ತಂಡವಾಗಿ ಜನರ ಮುಂದೆ ಸರ್ಕಾರದ ಸಾಧನೆಯನ್ನು ಬಿಚ್ಚಿಡೋಣ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನಪ್ಪ ಮಾತನಾಡಿ, ‘ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ
ಭಾರತದ ಗೌರವ ಹೆಚ್ಚುವಂತೆ ಮಾಡಿದ್ದಾರೆ. 192 ರಾಷ್ಟ್ರಗಳ ಪೈಕಿ, 186 ದೇಶಗಳೊಂದಿಗೆ ಭಾರತ ಉತ್ತಮ ರೀತಿಯ ಸಹಕಾರ ಸಂಬಂಧ ಹೊಂದುವಂತೆ ಮಾಡಿದ್ದಾರೆ’ ಎಂದು ತಿಳಿಸಿದರು.

‘2016ರ ನವೆಂಬರ್‌ 8ರಂದು ಕೈಗೊಂಡಿದ್ದ ನೋಟು ರದ್ದತಿ ಮತ್ತು ಕಳೆದ ವರ್ಷದ ಜಾರಿಗೊಳಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)... ಈ ಎರಡು ಕ್ರಾಂತಿಕಾರಕ ನಿರ್ಧಾರಗಳ ಮೂಲಕ ದೇಶದ ಆರ್ಥಿಕ ಸ್ಥಿತಿ ಸದೃಢವಾಗುವಂತೆ ಅವರು ಮಾಡಿದ್ದಾರೆ. ಇಡೀ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೊಂದಿರುವ ರಾಷ್ಟ್ರ ಭಾರತ’ ಎಂದು ಹೇಳಿದರು.

ಯಾವಾಗ ಬೇಕಾದರೂ ಚುನಾವಣೆ

‘ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ನಡೆಯುವ ಪರಿಸ್ಥಿತಿ ಇದೆ. ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಸೇರಿ ನಮಗೇ ಬಚಾವಾಗಲು ಆಗಲಿಲ್ಲ. ಇನ್ನು ಜಿ.ಪರಮೇಶ್ವರ್‌ ಅವರಿಗೆ ಸಾಧ್ಯವಾಗುತ್ತದೆಯೇ’ ಎಂದು ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.