ADVERTISEMENT

ಸುವರ್ಣಾವತಿ ಸೇತುವೆ ನಿರ್ಮಾಣಕ್ಕೆ ರೂ 1 ಕೋಟಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 10:55 IST
Last Updated 6 ಜನವರಿ 2012, 10:55 IST

ಚಾಮರಾಜನಗರ: `ತಾಲ್ಲೂಕಿನ ಸಿದ್ದಯ್ಯನಪುರ- ಹೊಂಗಲವಾಡಿಗೆ ಸಂಪರ್ಕ ಕಲ್ಪಿಸುವ ಸುವರ್ಣಾವತಿ ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರಕ್ಕೆ 1 ಕೋಟಿ ರೂ ಮೊತ್ತದ ಪ್ರಸ್ತಾವ ಸಲ್ಲಿಸಲಾಗಿದೆ~ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ತಾಲ್ಲೂಕಿನ ಸಿದ್ದಯ್ಯನಪುರದಲ್ಲಿ ಬುಧವಾರ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸೇತುವೆ ನಿರ್ಮಿಸಬೇಕೆಂಬುದು ಸಿದ್ದಯ್ಯನಪುರ, ಹೊಂಗಲವಾಡಿ ಗ್ರಾಮಸ್ಥರ ಬಹುದಿನದ ಬೇಡಿಕೆ ಯಾಗಿದೆ. ಹೀಗಾಗಿ, ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಸರ್ಕಾರ ದಿಂದ ಮಂಜೂರಾತಿ ಸಿಕ್ಕಿದ ತಕ್ಷಣ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಗ್ರಾಮದಲ್ಲಿ ಸಿಮೆಂಟ್ ರಸ್ತೆ, ಚರಂಡಿ ನಿರ್ಮಿಸಲು ವಿಶೇಷ ಘಟಕ ಯೋಜನೆಯಡಿ 25 ಲಕ್ಷ ರೂ ಮಂಜೂರಾಗಿದೆ.  ಮಂಟೇಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ 4 ಲಕ್ಷ ರೂ ನೀಡಲಾಗಿದೆ. ಶೀಘ್ರವೇ, ಕಾಮಗಾರಿ ಆರಂಭಿಸಬೇಕು. ಹಂತ ಹಂತವಾಗಿ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಅನುದಾನ ನೀಡಲಾಗುವುದು ಎಂದರು.

ಬರ ಪರಿಹಾರ ಯೋಜನೆಯಡಿ ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ 72 ಲಕ್ಷ ರೂ ಮಂಜೂರಾಗಿತ್ತು. ಇದರಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ 34.54 ಲಕ್ಷ ರೂ ಹಂಚಿಕೆ ಮಾಡಲಾಗಿದೆ. ಉಳಿದ ಹಣದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್, ಮೇವು ಕೇಂದ್ರ, ಗೋಶಾಲೆ ತೆರೆಯಲಾಗುವುದು ಎಂದು ತಿಳಿಸಿದರು.

ಜಿ.ಪಂ. ಸದಸ್ಯೆ ಆರ್. ಕಾವೇರಿ, ಮಾಜಿ ಉಪಾಧ್ಯಕ್ಷ ಶಿವಕುಮಾರ್, ತಾ.ಪಂ. ಸದಸ್ಯೆ ಮಹದೇವಮ್ಮ, ಗ್ರಾ.ಪಂ. ಅಧ್ಯಕ್ಷ ಚೆನ್ನಂಜಪ್ಪ, ಸದಸ್ಯ ಮಹದೇವು, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಚೆನ್ನಂಜಯ್ಯ, ಚಿಕ್ಕಬಸವಯ್ಯ, ಗುರುಸಿದ್ದಯ್ಯ, ರಾಮಕೃಷ್ಣ,  ಶಿವರಾಜು, ಹನುಮಂತು, ಸ್ವಾಮಿ, ಮೂರ್ತಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.