ADVERTISEMENT

ಸುವಾಸನೆ ಬೀರದ ಮಲ್ಲಿಗೆಹಳ್ಳಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 10:40 IST
Last Updated 8 ಫೆಬ್ರುವರಿ 2012, 10:40 IST

ಯಳಂದೂರು: `ಹಳ್ಳಬಿದ್ದ ರಸ್ತೆಗಳು, ಹೂಳೆತ್ತದ ಚರಂಡಿ, ನೀರಿಗಾಗಿ ಪರದಾಡುವ ಮಹಿಳೆಯರು, ಕೆಟ್ಟು ನಿಂತ ಕೈಪಂಪ್, ಉರಿಯದ ಬೀದಿ ದೀಪಗಳು...

ಹೌದು. ಇದು ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದ ನಿತ್ಯ ಸಮಸ್ಯೆ.
ಗ್ರಾಮದ ಬಹುತೇಕ ರಸ್ತೆಗಳನ್ನು ಇನ್ನೂ ನಿರ್ಮಿಸಿಲ್ಲ. ಆದರೆ, ಇವುಗಳಿಗೆ ಮಣ್ಣು ಮಾತ್ರ ಸುರಿಯಲಾಗಿದೆ. ಇಲ್ಲಿನ ಮೋರಿಗಳಲ್ಲಿ ಹೂಳೆತ್ತಿ ತಿಂಗಳುಗಳೇ ಕಳೆದಿದ್ದು ಇವೆಲ್ಲಾ ಗಬ್ಬು ನಾರುತ್ತಿವೆ. ಕೆಲವು ಬೀದಿಗಳಲ್ಲಿ ಚರಂಡಿಯೇ ನಿರ್ಮಿಸಿಲ್ಲ.

ಗ್ರಾಮದಲ್ಲಿ ಹಲವು ವರ್ಷಗಳಿಂದ ರಸ್ತೆ ಹದಗೆಟ್ಟಿದೆ. ಇಲ್ಲಿನ ರಸ್ತೆಗಳಿಗೆ ಕಾಯಕಲ್ಪ ಕೊಡುವ ಕೆಲಸ ಇನ್ನೂ ಆಗಿಲ್ಲ. ಕೆಲವು ನೀರಿನ ತೊಂಬೆಗಳ ನಿರ್ಮಾಣವಾಗಿದ್ದರೂ ಸಂಪರ್ಕ ಕಲ್ಪಿಸಿಲ್ಲ. ಇರುವ ಓವರ್‌ಹೆಡ್ ಟ್ಯಾಂಕ್ ಅನ್ನು ಶುಚಿಗೊಳಿಸಿ ಎಷ್ಟೋ ದಿನಗಳಾಗಿವೆ.

ಬಸವೇಶ್ವರ ದೇಗುಲದ ಬಳಿ ಇರುವ ಕೈಪಂಪು ಕೆಟ್ಟು 5 ತಿಂಗಳುಗಳು ಕಳೆದರೂ ದುರಸ್ತಿಗೊಳಿಸಿಲ್ಲ. ಕುಡಿಯುವ ನೀರಿಗೂ ಸಮಸ್ಯೆ ಇದೆ. ಗ್ರಾಮದಿಂದ ಗದ್ದೆಗಳಿಗೆ ತೆರಳುವ ರಸ್ತೆ ಹಳ್ಳಬಿದ್ದು ಹಲವು ದಿನಗಳಾಗಿದ್ದರೂ ಇದರ ದುರಸ್ತಿಯಾಗಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸರಿಪಡಿಸಲು ಸಾಧ್ಯವಿದ್ದರೂ ಈ ಕಾಮಗಾರಿ ಕೈಗೊಡಿಲ್ಲ.

ಪ್ರತಿ ಬೀದಿಗಳ ರಸ್ತೆಯೂ ಹಳ್ಳಬಿದ್ದಿದೆ. ಮಳೆಗಾಲದಲ್ಲಿ ಇದರಲ್ಲಿ ನೀರು ತುಂಬಿಕೊಳ್ಳುತ್ತಿದೆ. ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲೇ ನಿರುಪ ಯುಕ್ತವಾದ ಕೆರೆಯೂ ಇದೆ. ಇದ ರಲ್ಲಿನ ನೀರು ಕೊಳೆತು ನಾರುತ್ತಿದೆ. ಬಹುತೇಕ ಚರಂಡಿ ಸ್ಥಿತಿಯೂ ಹೀಗೆ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಮುಂದೆ ಬೇಸಿಗೆ ಕಾಲ ಬರುವುದರಿಂದ ಇದು ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ರೋಗ ಜನ್ಯಪ್ರದೇಶವಾಗಿ ಮಾರ್ಪಾಡಾಗುವ ಸಾಧ್ಯತೆಯೂ ಇದೆ.

ಹಾಗಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಂಭವವೂ ಇದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಲಿ ಎಂಬುದು ಗ್ರಾಮದ ಮಹಾದೇವಯ್ಯ, ಬೊಮ್ಮಶೆಟ್ಟಿ ಸೇರಿದಂತೆ ಹಲವರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.