ADVERTISEMENT

ಸೌಕರ್ಯ ಇಲ್ಲದ ಗ್ರಾಮ ಕಗ್ಗಳ

ಎನ್.ನಾಗರಾಜ್
Published 25 ಏಪ್ರಿಲ್ 2012, 10:35 IST
Last Updated 25 ಏಪ್ರಿಲ್ 2012, 10:35 IST

ಗುಂಡ್ಲುಪೇಟೆ: ರಸ್ತೆ ತುಂಬಾ ಕಸ, ತೊಂಬೆಯ ಬಳಿ ಪ್ಲಾಟ್‌ಫಾರಂ ಇಲ್ಲದೇ ನೀರು ಹಿಡಿಯಲು ಮಹಿಳೆ ಯರಿಗೆ ತೊಂದರೆ, ಸಮರ್ಪಕ ಬೀದಿ ದೀಪವಿಲ್ಲ, ಬಯಲು ಶೌಚಾಲಯ. ಇದು ತಾಲ್ಲೂಕಿನ ತೆರಕಣಾಂಬಿ ಹೋಬಳಿಯ ಕಗ್ಗಳ ಗ್ರಾಮದ ಚಿತ್ರಣ.

ಈ ಗ್ರಾಮವು ಕೆಲಸೂರು ಗ್ರಾಮ ಪಂಚಾಯಿತಿಗೆ ಸೇರ್ಪಡೆಯಾಗಿದ್ದು, ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಈ ಗ್ರಾಮದಲ್ಲಿ ನಾಯಕ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು ಕೂಲಿ, ಬೀಡಿ ಕಟ್ಟುವುದು, ವ್ಯಾಪಾರ ಇವರ ಪ್ರಮುಖ ಉದ್ಯೋಗವಾಗಿದೆ.

ಈ ಗ್ರಾಮವು 2004-05ನೇ ಸಾಲಿನಲ್ಲಿ ಕುಗ್ರಾಮ-ಸುಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು ಯೋಜನೆ ಅನುಷ್ಠಾನವಾಗದ ಕಾರಣ ಅಭಿವೃದ್ಧಿ ಕೆಲಸಗಳು ಆಗಲಿಲ್ಲ. ಆದರೆ, 2010-11ನೇ ಸಾಲಿನಲ್ಲಿ ಸುವರ್ಣ ಗ್ರಾಮೋದಯ ಯೋಜನೆಯಡಿ ಸಮುದಾಯ ಭವನ, ಚರಂಡಿ ನಿರ್ಮಾಣ ಕೆಲಸಗಳಾದರೂ ಪೂರ್ಣ ಪ್ರಮಾಣದಲ್ಲಿ ಸುವರ್ಣ ಗ್ರಾಮವಾಗಲಿಲ್ಲ. ಚರಂಡಿ ನೀರು ಹೋಗಲು ಸರಿಯಾದ ಮಾರ್ಗವಿಲ್ಲದೆ ಗ್ರಾಮದ ಮುಂಭಾಗದಲ್ಲಿರುವ ಕಟ್ಟೆ ಯಲ್ಲಿಯೇ ಕೊಳಚೆ ನೀರಿನ ಸಂಗ್ರಹ ವಾಗಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿವೆ.

ಗ್ರಾಮದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು 2 ಕೊಳವೆ ಬಾವಿಗಳಿದ್ದು 9 ತೊಂಬೆಗಳಿವೆ. ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ತೊಂಬೆಯ ಪ್ಲಾಟ್ ಫಾರಂ ಹಾಳಾಗಿರುವುದರಿಂದ ಮಹಿಳೆಯರು ನೀರನ್ನು ಅಲ್ಲಿಯೇ ಹಿಡಿದುಕೊಳ್ಳ ಬೇಕಾದ ಅನಿವಾರ್ಯತೆ ಇದೆ.

ಈ ಗ್ರಾಮದಲ್ಲಿ ಕಳೆದ 10 ವರ್ಷಗಳ ಹಿಂದೆಯೇ ಓವರ್‌ಹೆಡ್ ಟ್ಯಾಂಕ್ ನಿರ್ಮಾಣವಾಗಿದ್ದರೂ ಇನ್ನೂ ಸೇವೆಗೆ ದೊರಕಿಲ್ಲ. 2008- 09ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮಾಂತರ ಕುಡಿಯುವ ನೀರಿನ ಯೋಜನೆಯಡಿ 10 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ತಾಂತ್ರಿಕ ವಿಭಾಗ ದವರು ಕೊಳವೆ ಬಾವಿ ಕೊರೆಯಿಸಿ, ಪೈಪ್ ಲೈನ್ ಮಾಡಿಸಿದ್ದಾರೆ.

`ಮೋಟಾರ್ ಪಂಪ್ ಅಳವಡಿಸಿಲ್ಲ. ವಿದ್ಯುತ್ ಸಂಪರ್ಕ ನೀಡಿಲ್ಲ ಮತ್ತು ಹಾಗೂ ಗ್ರಾಮದ ಒಳಭಾಗಕ್ಕೆ ನೀರಿನ ಸಮರ್ಪಕ ವಿತರಣೆಗೆ ಪೈಪ್‌ಗಳನ್ನು ಅಳವಡಿಸದ ಕಾರಣ ಈ ಯೋಜನೆ ವಿಫಲವಾಗಿದೆ~ ಎಂದು ಗ್ರಾಮದ ಮಹಾದೇವಪ್ಪ ಹೇಳುತ್ತಾರೆ.

ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗದ ಎಂಜಿನಿಯರ್ ಅವರೊಡನೆ ಸಮಾಲೋಚನೆ ನಡೆಸಿ ಕೂಡಲೇ ನೀರಿನ ವಿತರಣೆಯ ಪೈಪ್‌ಲೈನ್ ಅಳವಡಿಸಲಾಗುವುದು ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ಸೆಸ್ಕ್‌ನ ಎಂಜಿನಿಯರ್ ರವರಿಗೆ ತಿಳಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವಪ್ರಸಾದ್ ತಿಳಿಸಿದ್ದಾರೆ.

ಈ ಗ್ರಾಮಕ್ಕೆ ಅತ್ಯಗತ್ಯವಾಗಿ ಓವರ್‌ಹೆಡ್ ಟ್ಯಾಂಕ್‌ನ ನೀರು ಅವಶ್ಯಕ ಮತ್ತು ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಬದಲಿ ವ್ಯವಸ್ಥೆ ಮಾಡಿ ಕೊಳ್ಳ ಬೇಕೆನ್ನುವುದು ಗ್ರಾಮದ ಯುವಕರ ಅಭಿಪ್ರಾಯ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.