ADVERTISEMENT

ಸ್ಮಾರಕಗಳಾಗುತ್ತಿರುವ ಕೈಪಂಪು!

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 10:55 IST
Last Updated 5 ಮಾರ್ಚ್ 2011, 10:55 IST

ಯಳಂದೂರು: ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಬಿಳಿಗಿರಿರಂಗನಬೆಟ್ಟದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಣ ಗುಳುಂ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯರಗಂಬಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ ನೂರಕ್ಕೂ ಅಧಿಕ ಕೈಪಂಪುಗಳಿವೆ. ಆದರೆ ಕಾರ್ಯ ನಿರ್ವಹಿಸುತ್ತಿರುವ ಸಂಖ್ಯೆ 20 ರ ಆಸುಪಾಸಿನಲ್ಲಿದೆ.

ಕೇವಲ ಬಿಲ್‌ಗಳನ್ನು ಪಾಸು ಮಾಡಿಕೊಳ್ಳುವು ದಕ್ಕಾಗಿಯೇ ಪೋಡುಗಳಲ್ಲಿ, ರಸ್ತೆಗಳಲ್ಲಿ ಜನರು ಓಡಾಡದ ಸ್ಥಳಗಳಲ್ಲೂ ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ. ನೀರು ಬಂತೋ, ಬಂದಿಲ್ಲವೋ, ಉಪಯೋಗವಿದೆಯೋ, ಇಲ್ಲವೋ ಎನ್ನುವುದರ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ ಎಂಬುದು ಗ್ರಾಮದ ಮಾದೇಗೌಡ, ಜಡೇಗೌಡ ಸೇರಿದಂತೆ ಹಲವರ ದೂರು.

ಗಂಗಾಧರೇಶ್ವರ ದೇಗುಲದ ಸುತ್ತಲೇ 5ಕ್ಕೂ ಅಧಿಕ ಕೈಪಂಪುಗಳಿವೆ. ಆದರೆ ಇದರಲ್ಲಿ ಯಾವುದೂ ಕಾರ್ಯನಿರ್ವಸುತ್ತಿಲ್ಲ. ಆದ್ದರಿಂದ ಇಲ್ಲಿಗೆ ಬರುವ ಭಕ್ತಾದಿಗಳಿಗೆ ತೊಂದರೆಯಾಗುತ್ತದೆ ಎಂಬುದು ಶಿವನಾಗಪ್ಪ, ನಂದೀಶ್ ಅವರ ದೂರು. ಇಲ್ಲಿರುವ ಬೋರ್‌ವೆಲ್‌ಗಳು ಕೆಟ್ಟು ನಿಂತು ತಿಂಗಳುಗಳು ಉರುಳಿದರೂ ಯಾರೂ ಕೂಡ ದುರಸ್ತಿ ಮಾಡಿಸಿಲ್ಲ. ಈ ಬಗ್ಗೆ ಪಂಚಾಯಿತಿಯ ಕಚೇರಿಯಲ್ಲಿ ದೂರನ್ನು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಯದರ್ಶಿ ಇಲ್ಲಿಗೆ ಬರುವುದೇ ಇಲ್ಲ ಎಂಬುದಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ದಾಸೇಗೌಡರು ‘ಪ್ರಜಾವಾಣಿ’ಗೆ ತಿಳಿಸಿದರು. ಈಗಲಾದರೂ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.