ADVERTISEMENT

ಸ್ವಚ್ಛತೆಗಾಗಿ ಕಾಯುತ್ತಿರುವ ಸಿಂಗಾನಲ್ಲೂರು

ಪ್ರಜಾವಾಣಿ ವಿಶೇಷ
Published 14 ಮೇ 2014, 6:54 IST
Last Updated 14 ಮೇ 2014, 6:54 IST
ಕೊಳ್ಳೇಗಾಲ ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮದಲ್ಲಿ ರಸ್ತೆ ಮಧ್ಯೆ ಗುಂಡಿ ತೆಗೆದು ನೀರಿನ ಪೈಪ್‌ನಿಂದ  ಬಾಲಕಿಯೊಬ್ಬಳು ನೀರು ಹಿಡಿಯುತ್ತಿರುವುದು.
ಕೊಳ್ಳೇಗಾಲ ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮದಲ್ಲಿ ರಸ್ತೆ ಮಧ್ಯೆ ಗುಂಡಿ ತೆಗೆದು ನೀರಿನ ಪೈಪ್‌ನಿಂದ ಬಾಲಕಿಯೊಬ್ಬಳು ನೀರು ಹಿಡಿಯುತ್ತಿರುವುದು.   

ಕೊಳ್ಳೇಗಾಲ: ಸ್ವಚ್ಛತೆ ಇಲ್ಲದೆ ಮಡುಗಟ್ಟಿ ನಿಂತಿರುವ ಚರಂಡಿ, ನೀರಿನ ಸಂಪರ್ಕ ಕಾಣದ ಸ್ಮಾರಕವಾಗಿ ನಿಂತ  ನೀರಿನ ತೊಂಬೆ. ಇದು ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮದ ದಲಿತರ ಬಡಾವಣೆ ಚಿತ್ರಣ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ ಹಿಂದೆಂದೂ ಕಂಡರಿಯದ ಅಂತರ್ಜಲ ಕುಸಿತದ ಪರಿಣಾಮ ಕೊಳವೆಬಾವಿಗಳು ಹಾಗೂ ಕಿರುನೀರು ಸರಬರಾಜು ತೊಂಬೆಗಳು ಸ್ಮಾರಕವಾಗಿ ನಿಂತಿವೆ.

ಹನೂರಿಗೆ ಪೂರೈಸುವ ಕಾವೇರಿ ನೀರು ಕೊಳಾಯಿಯಿಂದ ಗ್ರಾಮಕ್ಕೆ ನೀರು ಪೂರೈಸ ಲಾಗುತ್ತಿದ್ದು ಜನರು ರಸ್ತೆ ಮಧ್ಯದಲ್ಲೇ ಗುಂಡಿಗಳನ್ನು ತೆಗೆದು ನೀರು ಹಿಡಿಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಮಧ್ಯೆ ವಿದ್ಯುತ್‌ ಪೂರೈಕೆಯಲ್ಲಿಯೂ ಭಾರಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರು ನೀರಿಗಾಗಿ ಅಕ್ಕಪಕ್ಕದ ಜಮೀನುಗಳಲ್ಲಿ ನೀರಿಗಾಗಿ ಅಲೆದಾಡುವಂತಾಗಿದೆ.

ಗ್ರಾಮದ ಚರಂಡಿಯಲ್ಲಿ ಸಮರ್ಪಕ ಸ್ವಚ್ಛತೆ ಇಲ್ಲದೆ ಚರಂಡಿಗಳು ತ್ಯಾಜ್ಯಗಳಿಂದ ಮಡುಗಟ್ಟಿ ನಿಂತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂಬುದು ಇಲ್ಲಿನ ನಿವಾಸಿಗಳ ದೂರು.

ಗ್ರಾಮಕ್ಕೆ ಕುಡಿಯುವ ನೀರಿಗೆ ₨60ಲಕ್ಷ ಅಂದಾಜು ವೆಚ್ಚದಲ್ಲಿ ದೊಡ್ಡ ಹಾಗೂ ಮಿನಿ ಟ್ಯಾಂಕ್‌ ನಿರ್ಮಿಸಲಾಗುತ್ತಿದೆ. ಅಂತರ್ಜಲ ಕುಸಿತದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದು ಜಿ.ಪಂ. ಉಪಾಧ್ಯಕ್ಷ ಡಿ. ದೇವರಾಜು ತಿಳಿಸಿದ್ದಾರೆ.

ಗ್ರಾಮದ ಚರಂಡಿ ಸ್ವಚ್ಛತೆ ಹಾಗೂ ಇತರೆ ಮೂಲ ಸೌಲಭ್ಯಗಳ ಪೂರೈಕೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸು ವುದಾಗಿ ಹೇಳಿದ್ದಾರೆ.

ಗ್ರಾಮದ ಬೀದಿಗಳ ಚರಂಡಿ ಹಾಗೂ ರಸ್ತೆಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ಪೂರೈಕೆಗೆ ಈಗಲಾದರೂ ಸಂಬಂಧಪಟ್ಟವರು ಗಮನಹರಿಸಿ ಕೆಲಸ ಮಾಡಲಿ ಎಂಬುದು ಇಲ್ಲಿನ ಮಹಿಳಾ ಸಂಘಗಳ ಸದಸ್ಯರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.